ಆತ್ಮೀಯ ಸಾಹಿತ್ಯಾಭಿಮಾನಿಗಳೇ,
ಡಿಸೆಂಬರ್ ತಿಂಗಳಿನಲ್ಲಿ ಪ್ರತಿಲಿಪಿ ಕನ್ನಡ ಆಯೋಜಿಸಿದ್ದ 'ಲಲಿತ ಪ್ರಬಂಧ ಸ್ಪರ್ಧೆ'ಗೆ ನಿಮ್ಮ ಪ್ರತಿಕ್ರಿಯೆ ಎಂದಿನಂತೆ ನಿರೀಕ್ಷೆಗೂ ಮೀರಿದ್ದಾಗಿತ್ತು. ಸುಮಾರು ಐನೂರಕ್ಕೂ ಅಧಿಕ ಸ್ಪರ್ಧಿಗಳು ಕನ್ನಡದ ವಿಭಿನ್ನ ಬರಹ ಪ್ರಕಾರವಾದ 'ಲಲಿತ ಪ್ರಬಂಧ' ವನ್ನು ಈ ಸ್ಪರ್ಧೆಯ ಮೂಲಕ ರಚಿಸಿ ಪ್ರಕಟಿಸಿ ಸಾಹಿತ್ಯಪ್ರಿಯರ ಮುಂದಿಟ್ಟಿರುತ್ತಾರೆ. ಎಲ್ಲಾ ಸ್ಪರ್ಧಿಗಳಿಗೂ ಅನಂತ ಅಭಿನಂದನೆಗಳು. ಮತ್ತು ಈ ಬರಹಗಳನ್ನು ಓದಿ ಮೆಚ್ಚಿ ವಿಮರ್ಶಿಸಿ ತಿದ್ದಿ ಪ್ರೋತ್ಸಾಹಿಸಿದ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಕನ್ನಡ ಸಾಹಿತ್ಯಪ್ರಿಯರಿಗೆ ಪ್ರತಿಲಿಪಿ ಬಳಗದ ಪರವಾಗಿ ಧನ್ಯವಾದಗಳು.
ಸ್ಪರ್ಧೆಯ ಬರಹಗಳನ್ನು ಓದಿ ಭಾಷೆ, ಭಾವಲಾಲಿತ್ಯ, ಬರಹದ ಸ್ವರೂಪ ಮತ್ತು ಪ್ರಬಂಧದ ಲಹರಿ ಇತ್ಯಾದಿ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡಿದ ಕನ್ನಡದ ಖ್ಯಾತ ಲಲಿತ ಸಾಹಿತ್ಯ ಬರಹಗಾರ್ತಿ ಶ್ರೀಮತಿ ಭುವನೇಶ್ವರಿ ಹೆಗಡೆ ಅವರಿಗೆ ಎಲ್ಲಾ ಸ್ಫರ್ಧಿಗಳು, ಓದುಗರು ಮತ್ತು ಪ್ರತಿಲಿಪಿ ಬಳಗದ ವತಿಯಿಂದ ಅನಂತ ಕೃತಜ್ಞತೆಗಳು.
ತೀರ್ಪುಗಾರರ ನುಡಿ :
ಮೊಟ್ಟ ಮೊದಲು ಕನ್ನಡ ಸಾಹಿತ್ಯದ ಒಂದು ಮನಮೋಹಕ ಪ್ರಕಾರವಾದ ಲಲಿತ ಪ್ರಬಂಧ ಪ್ರಕಾರದಲ್ಲಿ ಸ್ಪರ್ಧೆ ಏರ್ಪಡಿಸಿ ಕನ್ನಡದ ಅನೇಕ ಹಿರಿಕಿರಿಯ ಮನಸ್ಸುಗಳು ಲೇಖನಿ ಹಿಡಿದು ಲಲಿತವಾಗಿ ಯೋಚಿಸುವಂತೆ ಮಾಡಿದ ಪ್ರತಿಲಿಪಿಯನ್ನು ಮನಸಾರೆ ಅಭಿವಂದಿಸುತ್ತೇನೆ. ಹಾಗೂ ಪಾಲ್ಗೊಂಡ ಎಲ್ಲ ಲೇಖಕ ಲೇಖಕಿಯರನ್ನು ಅಭಿನಂದಿಸುತ್ತೇನೆ.
ನಮಗೆಲ್ಲಾ ತಿಳಿದಿರುವಂತೆ ಕನ್ನಡ ಸಾಹಿತ್ಯವನ್ನು ಪುಷ್ಟೀಕರಿಸಿದ ಅನೇಕ ಸಾಹಿತ್ಯ ಪ್ರಕಾರಗಳು ನವೋದಯ ಕಾಲದಲ್ಲಿ ಪಾಶ್ಚಾತ್ಯ ರಿಂದ ನಮ್ಮಲ್ಲಿಗೆ ಬಂದು ಸೇರಿದವು. ವಿವಿಧ ಭಾಷೆಗಳ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸಿದ ನವೋದಯ ಕಾಲದ ಅನೇಕ ಲೇಖಕರು ಪ್ರಬಂಧ ದಿಂದಲೂ ಪ್ರಭಾವಿತರಾದರು. ಇಂಗ್ಲಿಷಿನಲ್ಲಿ'ಎಸ್ಸೆ' ಎಂದು ಕರೆಯಲ್ಪಡುವ ಈ ಪ್ರಬಂಧ ಪ್ರಕಾರಕ್ಕೆ ನಿಯಮಿತವಾದ ಚೌಕಟ್ಟಾಗಲೀ ಕಟ್ಟುಪಾಡುಗಳಾಗಲಿ ಇಲ್ಲದಿರುವುದು ಈ ಪ್ರಕಾರಕ್ಕೆ ಇರುವ ವಿಶೇಷತೆಯಾಗಿದೆ. ಹಾಗೂ ಈ ಸ್ವಾತಂತ್ರ್ಯ ಅಥವಾ ಸ್ವಚ್ಛಂದತೆ ಪ್ರಬಂಧ ಪ್ರಕಾರಕ್ಕೆ ಇರುವ ಮಿತಿಯಾಗಿಯೂ ಕೆಲವು ಕಡೆ ಭಾಸವಾಗುತ್ತದೆ.
ಲಲಿತ ಪ್ರಬಂಧಗಳನ್ನು ಗದ್ಯದ ಭಾವಗೀತೆ ಎಂದು ಕರೆಯುತ್ತಾರೆ. ಸಂಗೀತದಲ್ಲಿ ಸುಗಮಸಂಗೀತ ಇದ್ದ ಹಾಗೆ. ಶಾಸ್ತ್ರೀಯ ಸಂಗೀತಕ್ಕಿರುವ ಕಟ್ಟುಪಾಡುಗಳು ಸ್ವರ ವಿಧಾನಗಳ ಚೌಕಟ್ಟು ಸುಗಮಸಂಗೀತಕ್ಕೆ ಇರುವುದಿಲ್ಲ. ಆದರೆ ಸುಗಮ ಸಂಗೀತವೂ ಸ್ವರ ತಾಳ ಲಯಗಳನ್ನು ಬಿಟ್ಟು ತನ್ನಷ್ಟಕ್ಕೆ ತಾನು ಒಂದು ಪ್ರಕಾರವಾಗಿ ಬೆಳೆಯಲಾರದು. ಸುಗಮ ಸಂಗೀತಗಾರನಿಗೆ ಸ್ವರ ತಾಳ ಲಯಗಳ ಜ್ಞಾನ ಸರಿಯಾಗಿದ್ದರೆ ಆತ ಅಥವಾ ಆಕೆ ಹಾಡುವ ಹಾಡಿಗೆ ಶಾಸ್ತ್ರೀಯತೆಯ ಸ್ಪರ್ಶವೂ ಸುಸಂಬದ್ಧತೆಯ ಸೊಗಸು ತನ್ನಿಂತಾನೇ ಪ್ರಾಪ್ತವಾಗುತ್ತದೆ. ಹಾಗೆಯೇ ಲಲಿತಪ್ರಬಂಧಕಾರ ಇತರ ಪ್ರಕಾರಗಳಲ್ಲಿಯೂ ಪರಿಣಿತನಾಗಿದ್ದರೆ ಹೆಚ್ಚು ಹೆಚ್ಚು ಭಾಷೆಗಳ ಪರಿಚಯ ಉಳ್ಳವನಾಗಿದ್ದರೆ ಆತನ ಲಲಿತ ಪ್ರಬಂಧಕ್ಕೆ ಸಾಹಿತ್ಯಿಕ ಪುಷ್ಟಿ ಮತ್ತು ಸೌಂದರ್ಯ ತಾನೇ ತಾನಾಗಿ ಪ್ರಾಪ್ತವಾಗಿರುತ್ತದೆ. ನವೋದಯ ಕಾಲದ ಹೆಚ್ಚಿನ ಲಲಿತ ಪ್ರಬಂಧಗಳನ್ನು ಬರೆದ ನಮ್ಮ ಪೂರ್ವಸೂರಿಗಳು ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಾದ ಕಾದಂಬರಿಕಾರರು ನಾಟಕಕಾರರು ಕವಿಗಳು ಆಗಿದ್ದಾರೆ.ಡಿವಿಜಿ ಯಂತಹ ದಾರ್ಶನಿಕ ಕವಿಗಳಿಂದ ಹಿಡಿದು ಜಿ ಪಿ ರಾಜರತ್ನಂ, ಕುವೆಂಪು ಬೇಂದ್ರೆ..... ಹೀಗೆ ಪ್ರಸಿದ್ಧ ಕವಿಗಳು ಉತ್ಕೃಷ್ಟ ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. ಕುವೆಂಪು ಅವರ ಅಜ್ಜಯ್ಯನ ಅಭ್ಯಂಜನ, ಬೇಂದ್ರೆ ಅವರ ನಿರಾಭರಣ ಸುಂದರಿ ಪು ತಿ ನ ಅವರ ಗೋಕುಲಾಷ್ಟಮಿ ಗಳಂಥ ಪ್ರಬಂಧಗಳನ್ನು ಇಂದಿಗೂ ಓದುಗರು ನೆನಪಿಸಿಕೊಳ್ಳುತ್ತಾರೆ.
ಹಾಸ್ಯ ಸಾಹಿತ್ಯದ ಕುಟುಂಬಕ್ಕೆ ಸೇರುವ ಲಲಿತ ಪ್ರಬಂಧ ಹಾಸ್ಯ ಸಾಹಿತ್ಯದ ಒಂದು ಪ್ರಾತಿನಿಧಿಕವಾದ ಸಶಕ್ತವೂ ಆದ ಪ್ರಕಾರವಾಗಿದೆ. ಹಾಸ್ಯ ಸಾಹಿತ್ಯದಲ್ಲಿ ಲಲಿತ ಪ್ರಬಂಧ, ಹರಟೆ, ನಗೆಲೇಖನ, ಲಘುಪ್ರಬಂಧ ,ವಿಡಂಬನೆ ಹೀಗೆ ಅನೇಕ ಪ್ರಬೇಧಗಳಿದ್ದು ಅವುಗಳ ವೈಶಿಷ್ಟ್ಯ ಲಕ್ಷಣ ಹಾಗೂ ಭಿನ್ನತೆಯ ಕುರಿತಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚರ್ಚೆಯೇ ನಡೆದಿಲ್ಲ.
ಹೇಗೆ ಒಂದು ನದಿ ಅದು ಹೊಳೆಯಾಗಿ ಹರಿಯಲಿ, ರಭಸವಾಗಿ ಧುಮ್ಮಿಕ್ಕುವ ಜಲಪಾತವಾಗಿರಲಿ ಏನೇ ದೃಶ್ಯವೈಭವ ತೋರಿಸಿದರೂ ಅದರ ಮೂಲ ದ್ರವ್ಯ ಮಾತ್ರ ನೀರು ಹಾಗು ನೀರು ಮಾತ್ರ. ಹಾಗೆಯೇ ಲಲಿತ ಪ್ರಬಂಧ ಹರಟೆ ಲಘು ಲೇಖನ ಎಲ್ಲವುಗಳಿಗೂ ಜೀವನಪ್ರೀತಿ ಜೀವನೋತ್ಸಾಹವೇ ಮೂಲ. ಜೀವನ ಪ್ರೀತಿ ಇಲ್ಲದವರಿಗೆ ಹಾಸ್ಯ ದಕ್ಕುವುದಿಲ್ಲ. ಸಿನಿಕರು, ವಿರಕ್ತರು, ಬದುಕಿಗೆ ಬೆನ್ನು ಹಾಕಿದವರು ಹಾಸ್ಯವನ್ನು ಸೃಷ್ಟಿಸಲಾರರು ಮಾತ್ರವಲ್ಲ ಹಾಸ್ಯವನ್ನು ಆಸ್ವಾದಿಸಲಾರರು ಸಹ. ಉಲ್ಲಾಸವಿಲ್ಲದ ಕಡೆ ಲಲಿತಪ್ರಬಂಧ ಅರಳಲಾರದು. ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಪ್ರಬಂಧಕಾರ ನಿಗೆ ಸ್ವಾತಂತ್ರ್ಯ ಜಾಸ್ತಿ. ಏನನ್ನು ಬೇಕಾದರೂ ಯಾವ ರೂಪದಲ್ಲಿ ಬೇಕಾದರೂ ಬರೆಯಬಹುದು ಎನ್ನುವ ಈ ಅಪಾರ ಸ್ವಾತಂತ್ರ್ಯವೇ ಅನೇಕ ಬಾರಿ ಮಿತಿಯಾಗಿ ಪರಿಣಮಿಸುತ್ತದೆ ಘನವಾಗಿರಬೇಕು ಗಂಭೀರವಾಗಬಾರದು ವಿಚಾರವಿರಬೇಕು ಒಣ ತರ್ಕವಾಗಬಾರದು ಹಾಸ್ಯವಿರಬೇಕು ಆದರೆ ನಗೆಹನಿಯ ರೂಪ ತಾಳಬಾರದು.... ಹೀಗೆ ಇಂಥ ಅನೇಕ ವಿರೋಧಗಳನ್ನು ಒಟ್ಟಿಗೆ ನಿಭಾಯಿಸುವ ಚಾಕಚಕ್ಯತೆ ಲಲಿತಪ್ರಬಂಧಕಾರನಿಗೆ ಇರಬೇಕಾಗುತ್ತದೆ. ಘಟನೆ ಗಳಿಗಷ್ಟೇ ಬದ್ಧನಾಗಿದ್ದರೆ ಅದು ವರದಿ ಎನ್ನಿಸಿಕೊಳ್ಳುತ್ತದೆ, ಕಾಲ್ಪನಿಕತೆಯನ್ನು ಆಶ್ರಯಿಸಿದರೆ ಫಿಕ್ಷನ್ ಆಗಿ ಬಿಡುತ್ತದೆ ಆದ್ದರಿಂದ ಬುದ್ದಿವಂತನಾದ ಲಲಿತಪ್ರಬಂಧಕಾರ ಈ ಎರಡರ ನಡುವಿನ ಸುವರ್ಣ ಮಧ್ಯಮ ರೀತಿಯಲ್ಲಿ ಕಲಾತ್ಮಕವಾಗಿ ಬರೆದಿಡುವ ಜಾಣನಾಗಿರುತ್ತಾನೆ. ಲಲಿತ ಪ್ರಬಂಧಕ್ಕೆ ಅದರದ್ದೇ ಆದ ಒನಪು ಹೊಳಪು ಪ್ರಾಪ್ತವಾಗುವುದು ಪ್ರಬಂಧಕಾರನ ಅಧ್ಯಯನ ಜೀವನಾನುಭವ ಹಾಗೂ ಸ್ವಾರಸ್ಯಕರವಾಗಿ ಹರಟುವ ಮನೋಭೂಮಿಕೆಗಳು ಗಟ್ಟಿಯಾಗಿದ್ದಾಗ ಮಾತ್ರ.
ಹರಟೆ ಮತ್ತು ಲಲಿತ ಪ್ರಬಂಧಗಳಲ್ಲಿ ಇರುವ ವ್ಯತ್ಯಾಸ ತುಂಬ ಸೂಕ್ಷ್ಮವಾದುದು. ಹರಟೆ ಕಟ್ಟುಪಾಡು ಚೌಕಟ್ಟುಗಳಿಲ್ಲದೇ ಬರಹಗಾರನ ವಿಚಾರ ಲಹರಿಯನ್ನು ಆಶ್ರಯಿಸಿದರೆ ಲಲಿತ ಪ್ರಬಂಧ ಒಂದು ಕೇಂದ್ರದಿಂದ ಹೊರಟು ಮನಸ್ವಿಯಾಗಿ ಸುತ್ತಾಡಿ ಮತ್ತೆ ಅದೇ ಕೇಂದ್ರಕ್ಕೆ ಬಂದು ತಲುಪುವ ಬದ್ಧತೆಯನ್ನು ಹೊಂದಿರುತ್ತದೆ. ಉತ್ತಮ ಲಲಿತಪ್ರಬಂಧಗಳನ್ನು ಓದುವಾಗ ನಮ್ಮ ಆತ್ಮೀಯ ಹಾಗೂ ಮಾತುಗಾರನಾದ ಸ್ನೇಹಿತನ ಜತೆ ಬೆಳದಿಂಗಳಲ್ಲಿ ವಾಕ್ ಹೋಗಿ ಬಂದ ಚೇತೋಹಾರಿ ಅನುಭವ ನಮಗೆ ದಕ್ಕುತ್ತದೆ. ನದಿಯಲ್ಲಿಯೋ ಜಲಾಶಯದಲ್ಲಿಯೋ ದೋಣಿ ವಿಹಾರ ಹೊರಟಾಗ ನಾವಿಕನ ವ್ಯಕ್ತಿತ್ವ ಎಷ್ಟು ಸ್ವಾರಸ್ಯಕರವಾಗಿತ್ತು ಎನ್ನುವುದರ ಮೇಲೆ ನಮ್ಮ ದೋಣಿ ವಿಹಾರದ ಉಲ್ಲಾಸ ಅವಲಂಬಿಸಿರುತ್ತದೆ. ಆತ ಬಹುಶ್ರುತನಾಗಿದ್ದರೆ ಸ್ವಾರಸ್ಯಕರ ಮಾತುಗಾರನಾಗಿದ್ದರೆ ಆತ ತೋರಿಸುವ ದೃಶ್ಯಗಳಿಗೆ ಉಲ್ಲಾಸ ಅಂಟಿಕೊಂಡು ಇಡೀ ದೋಣಿವಿಹಾರ ನಮಗೆ ಅಪ್ಯಾಯಮಾನವಾಗಿ ಬಿಡುತ್ತದೆ ಬದಲು ನಾವಿಕ ತನ್ನ ವೃತ್ತಿಯಲ್ಲಿ ಪಳಗಿದವರು ಆಗಿರದೆ ಸಿಡುಕುಮೋರೆಯವನು ಆದರೆ ಒಟ್ಟಾರೆ ಸುಮ್ಮನೆ ನೀರಿನಲ್ಲಿ ಸುತ್ತು ಹಾಕಿ ಬಂದ ಅನುಭವವಷ್ಟೆ ನಮಗೆ ದಕ್ಕುತ್ತದೆ ಆದ್ದರಿಂದ ಲಲಿತ ಪ್ರಬಂಧಗಳಲ್ಲಿ ಗುರಿ ಮುಟ್ಟುವ ಧಾವಂತ ಕ್ಕಿಂತಲೂ ಮಾರ್ಗದ ದರ್ಶನದಲ್ಲಿ ದೊರಕುವ ಸ್ವಾರಸ್ಯವನ್ನು ಸವಿಯುವುದೇ ಮುಖ್ಯವಾಗಿರುತ್ತದೆ ಕೊಂಕು, ಮದ ಮಾತ್ಸರ್ಯ ಕಟಕಿಗಳು ಲಲಿತ ಪ್ರಬಂಧಗಳಲ್ಲಿ ಇರಬಾರದು. ಹೆಚ್ಚು ನಗೆ ಸಂಭಾಷಣೆಗಳು ಕೂಡ ಸಲ್ಲದು. ಲಲಿತವಾದ ವಿಚಾರಧಾರೆಯನ್ನು ಓದುಗನೊಂದಿಗೆ ಆತ್ಮೀಯ ಹರಟೆಯ ರೂಪದಲ್ಲಿ ಹಂಚಿಕೊಳ್ಳುವ ಗೆಳೆಯನಂತೆ ಲಲಿತಪ್ರಬಂಧಕಾರ ಭಾಸವಾಗಬೇಕು ಎಲ್ಲಿಯೂ ಭಾರವಾಗದ ಹಗುರಾಗಿಸುವ ನಿರೂಪಣೆ ಯಶಸ್ವಿ ಲಲಿತ ಪ್ರಬಂಧದ ಲಕ್ಷಣ. ಶಬ್ದಚಿತ್ರ ವಿನೋದ ಚಿತ್ರ ಎಂದು ಕರೆಯಲ್ಪಡುವ ಲಲಿತಪ್ರಬಂಧಕ್ಕೆ ಗಪದ್ಯ ಎಂದು ಸಹ ಕರೆಯಬಹುದಾಗಿದೆ.ಲಲಿತ ಪ್ರಬಂಧಕಾರನ ಓದು ವ್ಯಾಪಕವಾಗಿದ್ದರೆ ಓದುಗನಿಗೆ ಮಾರ್ಗಾಯಾಸ ಪರಿಹಾರವಾಗಿ ಲವಲವಿಕೆಯ ಸ್ಪರ್ಶ ತಾನಾಗಿಯೇ ಆಗಿರುತ್ತದೆ. ನಮ್ಮನ್ನು ನಗಿಸುವ ತಿದ್ದುವ, ಹೃದಯವನ್ನು ಅರಳಿಸುವ ಬುದ್ಧಿ ಯನ್ನು ಬೆಳೆಸುವ ಜ್ಞಾನವನ್ನು ವೃದ್ಧಿಸುವ ಲಲಿತ ಪ್ರಬಂಧಗಳಲ್ಲಿ ನೇರವಾಗಿ ನೀತಿಬೋಧನೆ ಇರುವಂತಿಲ್ಲ ಹಿನ್ನೆಲೆಯಲ್ಲಿ ಸೂಚ್ಯವಾದ ಮಾತುಗಳಲ್ಲಿ ತಿಳಿಸಬಹುದು. ನವಿರು ಒಗರು ಮಾತುಕತೆಗಳ ಸಂಗಮವಾಗಿರುತ್ತದೆ ಲಲಿತ ಪ್ರಬಂಧ ದಲ್ಲಿ ಪ್ರಾಸಂಗಿಕವಾಗಿ ವಚನಗಳನ್ನು ಹಾಡುಗಳನ್ನು ಕೀರ್ತನೆಗಳನ್ನು ಬಳಸಿಕೊಳ್ಳುವುದನ್ನು ನೋಡುತ್ತೇವೆ.ಗಾದೆಗಳು ಚುರುಕು ಸಂಭಾಷಣೆಗಳು ನುಡಿಚಿತ್ರಗಳು ಎಲ್ಲವನ್ನೂ ಬಳಸಿಕೊಂಡು ಲಲಿತವಾದ ಓಘದಲ್ಲಿ ವಿಚಾರ ಧಾರೆ ಹರಿಯುತ್ತದೆ.
ಪ್ರಬಂಧಗಳಲ್ಲಿ ಘಟನಾಪ್ರಧಾನ ಪ್ರಬಂಧಗಳು ವಿಚಾರಪ್ರಧಾನ ಪ್ರಬಂಧಗಳು ಎಂದು ವಿಂಗಡಿಸಿ ಕೊಳ್ಳುವುದಾದರೆ ಘಟನಾಪ್ರಧಾನ ಪ್ರಬಂಧಗಳು ಹಾಸ್ಯ ಲೇಖನಗಳು ಎನಿಸಿಕೊಳ್ಳುತ್ತವೆ. ವಿಚಾರಪ್ರಧಾನ ಪ್ರಬಂಧಗಳಲ್ಲಿ ವಿಚಾರವೊಂದರ ಸುತ್ತಮುತ್ತ ತಮಾಷೆಯ ಮಾತುಗಳಲ್ಲಿ ಸ್ವಾರಸ್ಯಕರ ವಾದಗಳನ್ನು ಹೂಡುತ್ತಾ ಕೂತು ಹರಟುವ ಅನುಭವ ದಕ್ಕುತ್ತದೆ ಕನ್ನಡದ ಹರಟೆಗಳ ಪಿತಾಮಹರಾದ ಲಾಂಗೂಲಾಚಾರ್ಯ ಅವರ ಪ್ರಬಂಧಗಳನ್ನು ಓದುವಾಗ ಬುದ್ಧಿ ಭಾವ ಎರಡಕ್ಕೂ ಹಿತವಾಗುವ ವಾದ ಸರಣಿಯೊಂದನ್ನು ನಮ್ಮ ಮುಂದಿಡುತ್ತ ಹೋಗುತ್ತಾರೆ
ಲಲಿತ ಪ್ರಬಂಧಗಳಲ್ಲಿ ಹಾಸ್ಯದ ಪ್ರಮಾಣ ಎಷ್ಟಿರಬೇಕು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಆಯಾ ವ್ಯಕ್ತಿಯ ಶೈಲಿಗೆ ಅನುಗುಣವಾಗಿ ಆತ ಬಳಸಬಹುದಾದ ಹಾಸ್ಯಕ್ಕೆ ಗದ್ಯ ,ಪದ್ಯ, ಒಗಟು ಲಾವಣಿ ಎಲ್ಲಿಂದ ಬೇಕಾದರೂ ದೃಷ್ಟಾಂತಗಳನ್ನು ತಂದು ತನ್ನ ವಾದ ಸರಣಿಗೆ ಪುಷ್ಟೀಕರಣ ಒದಗಿಸಬಹುದು. ವಿತಂಡ ವಾದ ಹೂಡಬಹುದು. ಆದರೆ ಕಟಕಿ ಅಣಕ ಚುಚ್ಚು ಮಾತು ಕುಹಕ ಗಳು ಲಲಿತ ಪ್ರಬಂಧಕ್ಕೆ ಅಗತ್ಯವಿಲ್ಲ. ವಿಡಂಬನೆಯ ಅಂಶ ಕೂಡ ಲಲಿತ ಪ್ರಬಂಧದಲ್ಲಿ ಹೆಚ್ಚು ಕಾಣಸಿಗದು. ಓದುತ್ತ ಹೋದಂತೆ ಲಲಿತವಾದ ಲಹರಿಯೊಂದರಲ್ಲಿ ನಾವು ತೇಲುತ್ತ ಕನಸು ಕಾಣುತ್ತ ನೆನಪುಗಳನ್ನು ಬೆಚ್ಚಗೆ ಅನುಭವಿಸುತ್ತಾ ತಿಳಿಯಾಗಿ ತುಟಿಯರಳಿಸಿಕೊಂಡು ಹಾಯಾದ ಚೇತರಿಕೆಯನ್ನು ಪಡೆಯಬಹುದಾದ ಪ್ರಕಾರ ಲಲಿತಪ್ರಬಂಧ. ಲಲಿತ ಪ್ರಬಂಧಗಳಲ್ಲಿ ಗಂಭೀರ ಸಂಗತಿಗಳು ಪ್ರತಿಪಾದಿತವಾದರೆ ಅಪಚಾರವೇನಲ್ಲ. ಆದರೆ ವಿಚಾರದ ಭಾರದಿಂದ ಪ್ರಬಂಧಗಳು ತುಳುಕಬಾರದು ಚಿಕ್ಕಪುಟ್ಟ ಸಂಗತಿಗಳನ್ನು ಮನಸ್ಸು ಅರಳಿಸುವ ಕ್ರಿಯೆಗೆ ಬಳಸಿಕೊಳ್ಳುವ ಚಾಕಚಕ್ಯತೆ ಸೌಂದರ್ಯಪ್ರಜ್ಞೆ, ಪ್ರಕೃತಿ ಪ್ರೇಮ, ಮಾನವ ಪ್ರೀತಿ ಮುಖ್ಯವಾಗಿ ಜೀವನಪ್ರೀತಿ ಜೀವನೋಲ್ಲಾಸ ಇವು ಲಲಿತ ಪ್ರಬಂಧದ ಹಿಂದೆ ಸಾಂದ್ರವಾಗಿರುತ್ತವೆ. ವ್ಯಕ್ತಿಗತ ವಿಚಾರಗಳಿಗಿಂತಲೂ ಸಂಗತಿಯೊಂದರ ಸುತ್ತ ಹೆಣೆದುಕೊಂಡು ಹೋಗುವ ಪ್ರಬಂಧಗಳು ಹೆಚ್ಚು ಆಕರ್ಷಕವಾಗಿರುತ್ತವೆ.
ಲಲಿತ ಪ್ರಬಂಧಗಳಲ್ಲಿ ಆಯಾ ಪ್ರಬಂಧಕಾರನ ಇಷ್ಟದ ಸಂಗತಿಗಳು ಅವರವರದೇ ಆದ ಶೈಲಿಯಲ್ಲಿ ಪ್ರತಿಪಾದಿತವಾಗಿರುತ್ತವೆ. ಅವುಗಳನ್ನು ಓದುವುದೇ ಒಂದು ರಸಾನುಭವ. ಕುವೆಂಪು ಅವರ ಅಜ್ಜಯ್ಯನ ಅಭ್ಯಂಜನ ಓದುತ್ತಾ ಓದುತ್ತಾ ಮಲೆನಾಡಿನ ಮಕ್ಕಳು ಚಳಿಗಾಲದಲ್ಲಿ ಪಡುವ ಸ್ನಾನದ ಕಷ್ಟವನ್ನು ತುಟಿಯರಳಿಸಿ ಕೊಂಡೇ ಸವಿಯುತ್ತೇವೆ. ತೀ ನಂ ಶ್ರೀ, ಎ ಎನ್ ಮೂರ್ತಿರಾವ್, ರಾಶಿ, ದಾಶರಥಿ ದೀಕ್ಷಿತ್, ಟಿಸುನಂದಮ್ಮ, ಆರಾಸೆ ಅ ರಾ ಮಿತ್ರ, ಹೀಗೆ ಕನ್ನಡ ಹಾಸ್ಯ ಕಣಜವನ್ನು ತಮ್ಮ ಪ್ರಬಂಧಗಳಿಂದ ತುಂಬಿದ ಹಿರಿಯರ ದಂಡೇ ದೊಡ್ಡದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಲೇಖಕರೂ ಕಡಿಮೆ ಏನಿಲ್ಲ ಶ್ರೀನಿವಾಸ ವೈದ್ಯ, ಎಂ ಎಸ್ ನರಸಿಂಹ ಮೂರ್ತಿ, ತುರುವೇಕೆರೆ ಪ್ರಸಾದ್, ಅಣಕು ರಾಮನಾಥ್ ಜೊತೆಗೆ ನನ್ನವೂ ಸೇರಿದಂತೆ ಭಿನ್ನ ಮಾದರಿಯ ಹಾಸ್ಯ ಪ್ರಬಂಧಗಳು ಪ್ರಸಕ್ತ ಸಮಯದಲ್ಲಿ ಪತ್ರಿಕೆಗಳಲ್ಲಿ ವಿಫುಲವಾಗಿ ಪ್ರಕಟವಾಗುತ್ತಿವೆ.
ಒಟ್ಟಾರೆಯಾಗಿ ಕನ್ನಡದ ಲಲಿತ ಪ್ರಬಂಧಕ್ಕೆ ಹಿರಿಯರ ಕೊಡುಗೆ ಎಷ್ಟು ಇದೆಯೋ ಹೊಸಬರ ಪ್ರವೇಶವೂ ಅಷ್ಟೇ ಅಗತ್ಯವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳು ಪ್ರತಿವರ್ಷ ಲಲಿತ ಪ್ರಬಂಧಗಳ ಸ್ಪರ್ಧೆಯನ್ನು ಏರ್ಪಡಿಸಿ ಗಣನೀಯ ಮೊತ್ತದ ಬಹುಮಾನಗಳನ್ನು ನೀಡುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷ ನೀಡುತ್ತಿರುವ ಪುಸ್ತಕ ಬಹುಮಾನಗಳಲ್ಲಿ ಲಲಿತ ಪ್ರಬಂಧ ಪ್ರಕಾರವೂ ಗಣನೀಯವಾದ ಲೇಖಕ ಲೇಖಕಿಯರನ್ನು ಆಕರ್ಷಿಸುತ್ತಿದೆ ಕನ್ನಡ ಪ್ರಬಂಧ ಪ್ರಕಾರದಲ್ಲಿ ಉತ್ತಮ ಕೃತಿಗಳು ಕೈ ಸೇರುವಂತೆ ಮಾಡಿದೆ. ಈ ಪರಂಪರೆಯನ್ನು ಪ್ರತಿಲಿಪಿಕನ್ನಡ ಮುಂದುವರಿಸಿರುವದು ಶ್ಲಾಘನೀಯ.
ಈ ಸ್ಪರ್ಧೆಗೆ ಬಂದು ಇಳಿದ ಲಲಿತ ಪ್ರಬಂಧಗಳ ಭಾರೀ ಪ್ರವಾಹವನ್ನು ನೋಡಿ ನಾನು ಬೆಚ್ಚಿ ಬಿದ್ದಿದ್ದು ನಿಜ. ಮೌಲ್ಯ ಮಾಪನದ ಮೊದಲ ಹಂತದ ಜೊಳ್ಳು ಮತ್ತು ಕಾಳುಗಳನ್ನು ಬೇರ್ಪಡಿಸುವ ಕ್ರಿಯೆ ನಡೆದಾಗ ಈ ಪ್ರವಾಹದಲ್ಲಿ ಗಟ್ಟಿಯಾಗಿ ಉಳಿದ ಪ್ರಬಂಧಗಳು ನೂರ ಮೂವತ್ತು ಅವುಗಳಲ್ಲಿ ಪುನಃ ಮೂವತ್ತನ್ನು ಆರಿಸಿ ಕೊಡುವ ಜವಾಬ್ದಾರಿ ನನ್ನ ಮೇಲಿತ್ತು ಏಕಕಾಲದಲ್ಲಿ ಅನೇಕಾನೇಕ ಲೇಖನಗಳನ್ನು ಓದುವ ಹೊಸದೇ ಆದ ಅನುಭವಕ್ಕೆ ನಾನು ತುತ್ತಾದೆ. ಲಲಿತ ಪ್ರಬಂಧಗಳನ್ನು ಬರೆಯುವುದು ಎಷ್ಟು ಕಷ್ಟವೋ ಅವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿ ಕೊಡುವುದು ಇನ್ನೂ ಕಷ್ಟ ಎಂಬ ಪರಿಸ್ಥಿತಿ ನನಗರಿವಾಯ್ತು. ಕೆಲವು ಉತ್ತಮ ಪ್ರಬಂಧಗಳು ಲಲಿತ ಪ್ರಬಂಧ ರಚನೆ ಯನ್ನು ನಮ್ಮ ಯುವಪೀಳಿಗೆ ಗಂಭೀರವಾಗಿ ತೆಗೆದುಕೊಂಡಿದೆ ಎಂಬ ಸಂತೋಷವನ್ನು ನೀಡಿದರೆ ಇನ್ನೂ ಕೆಲವು ಪ್ರಬಂಧಗಳು ಎನ್ನಲಾರದ ಲೇಖನಗಳು ಹೇಗೋ ಒಂದಿಷ್ಟು ಸಂಗತಿಗಳನ್ನು ಅಕ್ಷರರೂಪದಲ್ಲಿ ಇಳಿಸಿ ದರಾಯ್ತು ಎಂಬ ಧಾವಂತದಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೆಲವರ ಜೀವನಾನುಭವವೇ ಸುಂದರ ಬರಹಗಳಾಗಿ ಪ್ರಕಟಗೊಂಡರೆ ಇನ್ನೂ ಕೆಲವರು ಗೂಗಲ್ ಆಶ್ರಯಿತ ಮಾಹಿತಿಗಳನ್ನು ಪ್ರಬಂಧದ ರೂಪಕ್ಕೆ ಇಳಿಸಿ ಕಳಿಸಿದ್ದನ್ನು ನೋಡಿದಾಗ ಸ್ವಲ್ಪ ನಿರಾಸೆಯೂ ಆಯಿತು. ಕೆಲವು ಪ್ರಬಂಧಗಳು ಆತ್ಮಕಥೆಯ ಭಾಗವಾಗಿದ್ದಂತೆ ಭಾಸವಾಗುತ್ತಿದ್ದವು. ಬಾಲ್ಯವನ್ನು ನೆನೆಸಿಕೊಳ್ಳುವ ಅನೇಕ ಪ್ರಬಂಧಗಳು ಇದರಲ್ಲಿ ಸೇರಿವೆ. ಲಲಿತ ಪ್ರಬಂಧವಾದರೂ ಬರಹಗಳಲ್ಲಿ ವ್ಯಕ್ತವಾಗುವ ಬರಹಕ್ಕೆ ಭಾವಕ್ಕೆ ಘನತೆ ಇರಬೇಕಾದುದು ಅಪೇಕ್ಷಣೀಯ. ಅಂತಹ ವಿಚಾರಧಾರೆಯ ಪ್ರಬಂಧಗಳನ್ನು ಇವುಗಳಲ್ಲಿ ಕಾಣಬಹುದಾಗಿದೆ. ನಿರ್ಣಾಯಕರಿಗೆ ಪ್ರಬಂಧಕಾರರ ಹೆಸರು ಊರು ಗಳು ಮರೆಮಾಚಲ್ಪಟ್ಟಿರುತ್ತದೆ ಆದ್ದರಿಂದ ಇದನ್ನು ಬರೆದವರು ಮಹಿಳೆಯರೋ ಪುರುಷರೋ ಎಂಬುದು ತಿಳಿದಿರುವುದಿಲ್ಲ ಅದು ತುಂಬಾ ಒಳ್ಳೆಯದು ಕೂಡ ಬರಹಗಳಲ್ಲಿ ಮಹಿಳೆಯರದ್ದು ಅಥವಾ ಪುರುಷರದ್ದು ಎಂಬ ಭೇದವೇ ಸಲ್ಲದು. ಇಲ್ಲಿ ಭಾಗವಹಿಸಿದ ಎಲ್ಲ ಪ್ರಬಂಧಕಾರರು ಜೀವನದ ಸೊಗಸನ್ನು ಬೇರೆ ಬೇರೆ ಕೋನಗಳಿಂದ ಹಿಡಿದುಕೊಟ್ಟಿದ್ದಾರೆ. ಪ್ರಾಣಿಪ್ರೀತಿ ಪ್ರಕೃತಿ ಪ್ರೇಮ, ದಯೆ ಕರುಣೆಗಳಂಥ ಭಾವಗಳು ಇಲ್ಲಿ ವ್ಯಕ್ತವಾಗಿವೆ ಸಾಹಿತ್ಯದ ಓದು ಮತ್ತು ಭಾಷಿಕ ಶಿಸ್ತಿನ ಅಭಾವ ಹೆಚ್ಚಿನ ಪ್ರಬಂಧಗಳಲ್ಲಿ ಕಂಡು ಬಂದಿದ್ದು ನಿಜ. ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರಿಂದ ಬರಹಗಳಲ್ಲಿ ಕಸುವು ಹೆಚ್ಚುವುದನ್ನು ಯಾರೂ ಕೂಡ ಒಪ್ಪಲೇಬೇಕು. ಅಂತಹ ಪ್ರಾಮಾಣಿಕ ಓದಿನ ಹರವನ್ನು ಪ್ರತಿಲಿಪಿಯ ಪ್ರಬಂಧಕಾರರೆಲ್ಲರೂ ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳಲೆಂದು ಬಯಸುತ್ತೇನೆ. ಸ್ಪರ್ಧೆಯ ಚೌಕಟ್ಟಿನೊಳಗೆ ಎಲ್ಲ ಪ್ರಬಂಧಗಳಿಗೂ ಬಹುಮಾನ ಕೊಡಲು ಸಾಧ್ಯವಿಲ್ಲವೆಂಬುದು ನಿಮಗೆ ವೇದ್ಯವಾದ ಸಂಗತಿಯೇ ತಾನೆ ? ಆಯ್ಕೆಯ ಈ ಕಠಿಣ ಸವಾಲಿನಲ್ಲಿ ನಾನು ಎಷ್ಟು ನ್ಯಾಯ ಒದಗಿಸಿದ್ದೇನೆ ಎಂದು ಹೇಳಲಾರೆನಾದರೂ ಈ ಎಲ್ಲ ಬರಹಗಳನ್ನು ಸ್ಪರ್ಧೆಯ ಕಾರಣ ದಿಂದಾಗಿ ಓದಲಾಯಿತು ಎಂಬುದೇ ನನಗೆ ದಕ್ಕಿದ ಲಾಭ. ದಯವಿಟ್ಟು ಎಲ್ಲ ಪ್ರಬಂಧಕಾರರು ಮುಖ್ಯವಾಗಿ ಬಹುಮಾನ ಬರದಿದ್ದವರು 'ಭಾಗವಹಿಸಿದ ಎಲ್ಲ ಸ್ಪರ್ಧಿಗಳೂ ಬಹುಮಾನ ಪಡೆಯಲಾರರು' ಎಂಬ ಸರಳ ಸತ್ಯವನ್ನು ಹಾಗೂ ಸ್ಪರ್ಧೆಯ ನಿಯಮಗಳನ್ನು ಗೌರವಿಸುತ್ತಾ ಪ್ರಬಂಧ ಬರೆಯುವ ತಮ್ಮ ಕಾಯಕವನ್ನು ಮುಂದುವರೆಸುತ್ತಾರೆ ಎಂಬ ಭರವಸೆ ನನಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಶಕ್ತವಾದ ಲಲಿತ ಪ್ರಬಂಧಗಳು ನಿಮ್ಮೆಲ್ಲರ ಲೇಖನಿಯಿಂದ ಮೂಡಿ ಬರಲಿ ಎಂದು ಹಾರೈಸುತ್ತೇನೆ
- ಭುವನೇಶ್ವರಿ ಹೆಗಡೆ.
ವಿಜೇತ ಕೃತಿಗಳ ಮಾಹಿತಿ :
ಪ್ರಥಮ ಬಹುಮಾನ: ಐದು ಸಾವಿರ ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರ
ವಿಜಯಾ ಎಸ್ ಪಿ ವಿರಚಿತ ಮಲೆನಾಡಿನ ರಸ, ರೂಪ, ಗಂಧ...ಲಲಿತ ಪ್ರಬಂಧ
ಪ್ರಬಂಧದ ಕುರಿತು ತೀರ್ಪುಗಾರರ ನುಡಿ : ಪ್ರಬಂಧದ ಸಾರವನ್ನು ತಲೆಬರಹದಲ್ಲಿಯೇ ಸೂಚಿಸುವ ಈ ಪ್ರಬಂಧದಲ್ಲಿ ಮಲೆನಾಡಿನ ಭೌಗೋಳಿಕ ಸಾಂಸ್ಕೃತಿಕ, ಕೌಟುಂಬಿಕ, ಹಾಗೂ ಸಾಮಾಜಿಕ ಚಿತ್ರಣಗಳನ್ನು ಭೂತಕಾಲದ ಮತ್ತು ವರ್ತಮಾನದ ಹೋಲಿಕೆ ಯೊಂದಿಗೆ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಪ್ರಕೃತಿಯ ನಡುವಲ್ಲಿ ಪ್ರೇಮದ ಪ್ರಕತಿಯನ್ನು ಅಳವಡಿಸಿಕೊಂಡ ಮಲೆನಾಡಿನ ಜನರ ಜೀವನ ಪ್ರೀತಿಯನ್ನು ಅನುಭವಿಸಿ ಬರೆದಿದ್ದರಿಂದ ಬರಹಕ್ಕೆ ಅಥೆಂಟಿಸಿಟಿ ಕೂಡ ಬಂದಿದೆ. ಪ್ರಸ್ತುತ ಸಂದರ್ಭದ ಮಲೆನಾಡು ಟೂರಿಸ್ಟ್ ಸ್ಪಾಟ್ ಆಗುತ್ತಾ ಹೋಂಸ್ಟೇಗಳ ಹಾವಳಿಗೆ ತುತ್ತಾಗಿ ತನ್ನ ನೈಜ ಸೊಗಸನ್ನು ಕಳೆದುಕೊಳ್ಳುವ ಭಯವನ್ನು ವ್ಯಕ್ತಪಡಿಸಲು ಈ ಪ್ರಬಂಧಕಾರರು ಹಳಹಳಿಕೆಯ ಧಾಟಿಯನ್ನು ಬಿಟ್ಟು ಸಹಜವಾಗಿ ಬಂದೊದಗುವ ಬದಲಾವಣೆಗಳನ್ನು ಸ್ವೀಕರಿಸಲೇಬೇಕೆಂದು ನಿರ್ಲಿಪ್ತ ಧೋರಣೆ ಯನ್ನು ವ್ಯಕ್ತಪಡಿಸಿದ್ದಾರೆ. ಮಲೆನಾಡಿನ ಖಾದ್ಯಗಳನ್ನು ಬಣ್ಣಿಸುವಾಗ ಅದರ ಜೊತೆ ಸೇರಿಕೊಂಡ ಸವಿನೆನಪುಗಳನ್ನು ದಾಖಲಿಸಿದ್ದಾರೆ. ಪರಿಸರ ಸಮ್ರದ್ಧಿಯ ಪೂರಕ ಜೀವನಕ್ರಮವೊಂದು ಸಮಗ್ರ ಸಂಸ್ಕೃತಿಯ ಪ್ರತಿಬಿಂಬವಾಗುವುದನ್ನು ಪ್ರಬಂಧದಲ್ಲಿ ದಾಖಲಿಸಿದ ಪರಿ ಲಲಿತವಾಗಿದೆ. 'ಹೂವು ಭುವನದ ಭಾಗ್ಯ ವಾದರೆ ಹಣ್ಣು ಭುವನದ ವಿಸ್ಮಯ' ಎನ್ನುವ ಪ್ರಬಂಧಕಾರರು ಮಲೆನಾಡಿನ ಪ್ರತಿ ಹೂ ಹಣ್ಣು ತರಕಾರಿ, ತಿನ್ನುವ ವ್ಯಂಜನಗಳನ್ನು ತಾದಾತ್ಮ್ಯದಿಂದ ವರ್ಣಿಸುತ್ತ ಮಲೆನಾಡು ತನ್ನನ್ನು ರಸರೂಪ ಗಂಧಿಯಾಗಿ ಪೊರೆಯುತ್ತಿರುವ ಜೀವವಾಹಿನಿ ಎನ್ನುತ್ತಾರೆ.
ದ್ವಿತೀಯ ಬಹುಮಾನ : ನಾಲ್ಕು ಸಾವಿರ ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರ
ಉಮಾಶಂಕರ ಸಿ ಅವರ ಶಾಲೆಯ ಮೊದಲ ದಿನಗಳು
ಪ್ರಬಂಧದ ಕುರಿತು ತೀರ್ಪುಗಾರರ ನುಡಿ: ಓದುಗರೆಲ್ಲರೂ ಬಾಲ್ಯದಲ್ಲಿ ಅನುಭವಿಸಿದ ಈ ವಿಚಿತ್ರ ಸಂಕಟದ ಸಮಯವನ್ನು ವಿನೋದಮಯ ಧಾಟಿಯಲ್ಲಿ ಬರೆದುಕೊಂಡು ಹೋಗಿರುವುದು ಈ ಪ್ರಬಂಧದ ವೈಶಿಷ್ಟ್ಯ. ತಿಮ್ಮೇನಹಳ್ಳಿಯ ಶಾಲೆಯಲ್ಲಿ ತಮ್ಮ ಶಾಲೆಯ ಮೊದಲ ದಿನವನ್ನು ಪ್ರಾರಂಭಿಸುವ ಪ್ರಬಂಧಕಾರರು ಅಲ್ಲಿ ದಾಖಲಾದ ಚಿಕ್ಕ ಪುಟ್ಟ ಮಕ್ಕಳು ವಿವಿಧ ಬಗೆಯ ಅಳುವಿನ ಸ್ವರ ವಾದ್ಯಗಳನ್ನು ಬಾರಿಸುತ್ತಾ ಶಾಲೆಗೆ ದಾಖಲಿಸಿದ ತಮ್ಮ ಹಿರಿಯರ ಹಠಕ್ಕೆ ಪ್ರತಿರೋಧ ತೋರಿಸುವ ಮರಿ ಯೋಧರಂತೆ ಕಂಡುಬರುತ್ತಾರೆ. ಪ್ರಬಂಧಕಾರರ ತಂದೆಯು ಮಗುವನ್ನು ಹೆಡ್ ಮಾಸ್ಟ್ರ ಕೈಗೊಪ್ಪಿಸಿ ಹೋದ ಬಳಿಕದ ಇಡೀ ದಿನದ ವಿದ್ಯಮಾನವನ್ನು ಹೆಡ್ ಮಾಸ್ಟರ್ ಅವರು ಮಕ್ಕಳ ಅಳುವಿನ ಮುಂದೆ ಸೋತು ಮಗುವನ್ನು ಪುನಃ ಮನೆಗೊಯ್ದು ಒಪ್ಪಿಸುವ ತನಕದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾ ಕೊನೆಯಲ್ಲಿ ಈಗ ತನ್ನ ಮಗನನ್ನು ಸಹ ಶಾಲೆಗೆ ಬಿಟ್ಟು ತನ್ನ ಅಪ್ಪನ ಹಾಗೆ ಮಗು ಅಳುತ್ತಿರುವುದನ್ನು ಕಂಡೂ ಕಾಣದ ಹಾಗೆ ಬಂದಿದ್ದನ್ನು ಒಪ್ಪಿಕೊಳ್ಳುತ್ತಾರೆ. ಅಂದಿನ ಅಧ್ಯಾಪಕರುಗಳ ಸಂಕಟ ಹಾಗೂ ಅದನ್ನು ಪರಿಹರಿಸುವಲ್ಲಿ ಅವರಿಗಿದ್ದ ದಯಾಪೂರ್ಣ ಆಸಕ್ತಿ ವಾತ್ಸಲ್ಯ ಗಳೆಲ್ಲವೂ ಪ್ರಬಂಧದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲ್ಪಟ್ಟಿದೆ . ಪ್ರಬಂಧದಲ್ಲಿ ಬಳಸಲಾದ ಭಾಷೆಯ ತಾಜಾತನ ಹಾಗೂ ಹೋಲಿಕೆಗಳ ಸ್ವಾರಸ್ಯ ಪ್ರಬಂಧಕ್ಕೆ ಸೌಂದರ್ಯವನ್ನು ತಂದಿತ್ತಿವೆ .ಅತ್ತರೂ ಏನೂ ಪ್ರಯೋಜನವಿಲ್ಲವೆಂಬುದು ಅಷ್ಟು ದಿನಗಳಲ್ಲಿ ನಮ್ಮ ಅರಿವಿಗೆ ಬಂದಿತ್ತು . ಎಂಬಂಥ ವಾಕ್ಯಗಳು ಮಗುವಿನ ಮುಗ್ಧ ಮನಃಸ್ಥಿತಿಯನ್ನು ಮೀರಿದ ವೈನೋದಿಕ ವಿಶ್ಲೇಷಣೆಯಂತೆ ತೋರಿಬರುತ್ತದೆ.
ತೃತೀಯ ಬಹುಮಾನ : ಮೂರು ಸಾವಿರ ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರ
ಶ್ರೀನಾಥ್ ಫೇಸ್ಬುಕ್ ಅವರ ಬಿಸಿ ತುಪ್ಪ
ಪ್ರಬಂಧದ ಕುರಿತು ತೀರ್ಪುಗಾರರ ನುಡಿ: ಮೊದಲ ನೋಟಕ್ಕೆ ಅತಿರೇಕದ ಶಿಸ್ತಿನ ನಡವಳಿಕೆಯನ್ನು ತೋರುವ ಹಾಗೂ ತನ್ನ ಕೈಕೆಳಗಿನ ವರಿಂದ ಅತಿಯಾದ ಸಮಯ ಪ್ರಜ್ಞೆಯನ್ನು ನಿರೀಕ್ಷಿಸುವ ಬಾಸ್ ಒಬ್ಬರ ವಿಡಂಬನಾತ್ಮಕ ಚಿತ್ರಣ ಎಂಬಂತೆ ತೋರಿಬಂದರೂ ಈ ಪ್ರಬಂಧದಲ್ಲಿ ಕೊನೆಯಲ್ಲಿ ಅನಾವರಣಗೊಳ್ಳುವ ಮಾನವೀಯ ಗುಣವೊಂದು ಆ ಬಾಸ್ ಮನಃಸ್ಥಿತಿಯಲ್ಲಿಯೇ ತಂದ ಬದಲಾವಣೆಯನ್ನು ಅನಾವರಣ ಮಾಡಿದಾಗ ಪ್ರಬಂಧವು ನಮ್ಮ ಹೃದಯವನ್ನು ತಟ್ಟಿಬಿಡುತ್ತದೆ. ಅನ್ನಲಾರದ ಅನುಭವಿಸಲಾಗದ ಬಿಸಿ ತುಪ್ಪದ ಅನುಭವವನ್ನು ಸದಾ ಒದಗಿಸುವ ಬಾಸ್ ನ ಅತಿರೇಕದ ಬೈಗುಳುಗಳು ಕೋಪಗಳನ್ನು ತಮಾಷೆಯ ಧಾಟಿಯಲ್ಲಿ ಓದುತ್ತ ಹೋಗುವ ನಮಗೆ ಆತ ಬೇಗ ಬೇಗ ಎಂದು ಗಡಿ ಬಿಡಿಸುವ ಹಿನ್ನೆಲೆಯನ್ನು ಅರಿತಾಗ ವಿಶಿಷ್ಟ ಸಂವೇದನೆ ಯೊಂದಕ್ಕೆ ಒಳಗಾಗುತ್ತೇವೆ .ಆ ಬಾಸ್ನ ತಂದೆ ಅವರಿಗೆ ಒಮ್ಮೆ ನೀರು ಕೊಡಲು ಕೇಳಿದರಂತೆ. ಅದನ್ನು ತರಲು ಅವರು ನಿಧಾನವಾಗಿ ಹೋಗಿ ನಿಧಾನವಾಗಿ ಬಂದು ಕೊಡಲು ಬಂದಾಗ ಅವರ ತಂದೆ ನಿಧನರಾಗಿದ್ದ ರಂತೆ! ಅದಕ್ಕಾಗಿಯೇ ಯಾರಿಗಾದರೂ ಏನಾದರೂ ಕೆಲಸ ಹೇಳಿ ಅವರು ಅದನ್ನು ಮಾಡಲು ತಡಮಾಡಿದರೆ ಇವರಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು ಮನುಷ್ಯನ ಸ್ವಭಾವ ವೈಚಿತ್ರ್ಯವನ್ನು ಬಣ್ಣಿಸಲು ವಿನೋದ ವಿಷಾದ ಗಳೆರಡನ್ನೂ ಬಳಸಿಕೊಂಡ ಪ್ರಬಂಧ ಇದು . ಆ ವಿಚಿತ್ರ ಸ್ವಭಾವದ ಮೇಲಧಿಕಾರಿಯ ನ ಹುಚ್ಚಾಟಗಳನ್ನು ಹಾಗೂ ಅವನಿಂದ ವಿನಾಕಾರಣ ಬೈಸಿಕೊಳ್ಳುವ ಕೈಕೆಳಗಿನ ಸಿಬ್ಬಂದಿಗಳು ಅನುಭವಿಸುವ ಅವಮಾನ ದುಃಖಗಳ ಪ್ರಕರಣಗಳನ್ನು ಓದುತ್ತ ಬಂದ ನಮಗೆ ಆತನೊಬ್ಬ ಕ್ರಿಮಿನಲ್ ಎಂದು ಅನ್ನಿಸುತ್ತದೆ. ಆದರೆ ಕೊನೆಯಲ್ಲಿ ಅದರ ಕಾರಣ ಅನಾವರಣವಾದಾಗ ಆ ಮನುಷ್ಯನ ವೈಪರೀತ್ಯವನ್ನು ಕ್ಷಮಿಸುಬಿಡು ಔದಾರ್ಯದ ಬುದ್ಧಿಯೂ ಕೊನೆಯಲ್ಲಿ ನಮ್ಮಲ್ಲಿ ಜಾಗೃತವಾಗುತ್ತದೆ. ಪರಿಣಾಮಕಾರಿ ಬರವಣಿಗೆಯ ಲಕ್ಷಣ ಇದು.
ನಾಲ್ಕನೆಯ ಬಹುಮಾನ : ಎರಡು ಸಾವಿರ ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರ
ಅಕ್ಷರಗಳ ಅಲೆಮಾರಿ ಅವರ ಹುಡುಗಿಯೊಬ್ಬಳ ಹಾಯ್ಕುಗಳು
ಪ್ರಬಂಧದ ಕುರಿತು ತೀರ್ಪುಗಾರರ ನುಡಿ: ಫ್ಯಾಂಟಸಿ ಎಂಬಂತೆ ಭಾಸವಾಗುವ ಈ ಪ್ರಬಂಧದಲ್ಲಿ ಸುಲಲಿತವಾದ ಓಘವಿಲ್ಲದಿದ್ದರೂ ಹದಿಹರೆಯದ ಭಾವನೆಗಳನ್ನು ತಾಕಲಾಟಗಳನ್ನು ಸಹಜವಾಗಿ ಎಲ್ಲ ಗೊಂದಲಗಳ ನಡುವೆಯೇ ಹಿಡಿದಿಟ್ಟ ರೀತಿ ತಾಜಾತನದಿಂದ ಕೂಡಿದೆ."ಹುಚ್ಚಿ ಅಳಬ್ಯಾಡ ಬದುಕು ನಿನ್ನನ್ನು ನಮ್ಮೆಲ್ಲರಿಗಿಂತ ತುಸು ಜಾಸ್ತಿನೇ ಆದ್ರ ನೀನು ಏನು ಕಡಿಮೆ ಇಲ್ಲ. ಅದರ ಮ್ಯಾಲ್ ಅಷ್ಟು ಹಟಮಾಡಿ ಏರಿ ಕುಂತಿದಿ...ಲೈಫ್ ಎಲ್ಲರ್ ಜೊತೇನೂ ಚಲೋ ಇರೋದಿಲ್ಲ ಹಂಗಂತ ನಾವು ಲೈಫ್ನ ಗುಡ ಚೆಂದ ಇರಬಾರದು ಅಂತಿಲ್ಲ. ಟೈಮ್ ಅನ್ನೋದು ಎಲ್ಲ ಕಾಲಕ್ಕೂ ಕೆಟ್ಟದ್ದ ಇರೋದಿಲ್ಲ..... ಎಂಬ ಸಮಾಧಾನದ ಮಾತುಗಳು ಹದಿಹರೆಯಕ್ಕೆ ಅರ್ಥವಾಗುವ ರೀತಿಯಲ್ಲಿ ಅರ್ಥ ಮಾಡಿಸುವಲ್ಲಿ ಸೊಗಸಿದೆ. ಹದಿಹರೆಯದ ಪ್ರೀತಿ ಪ್ರೇಮಗಳನ್ನು ಸುತ್ತಾಟಗಳನ್ನು ಬಣ್ಣಿಸುವ ರಭಸದಲ್ಲಿ ಪ್ರಬಂಧದಲ್ಲಿ ಬರುವ ಪಾತ್ರಗಳು ಹಾಗೂ ಬರವಣಿಗೆಯ ಬಂಧಗಳಲ್ಲಿ ಸ್ವಲ್ಪ ಕನ್ ಫ್ಯೂಷನ್ ಇರುವಂತೆ ಕಾಣುತ್ತದೆಯಾದರೂ ಈ ತಾಂತ್ರಿಕ ದೋಷವನ್ನು ಮೀರಿದ ತಾತ್ವಿಕ ವಿಚಾರ ಪ್ರಬಂಧದಲ್ಲಿ ಮಂಡಿತವಾಗಿದ್ದು ಲಲಿತ ಪ್ರಬಂಧವು ಬದುಕಿನ ಗಂಭೀರ ಸಂಗತಿಗಳನ್ನೂ ಬಾಲಿಶ ಭಾವನೆಗಳ ಮುಖಾಂತರವೇ ವಿಶ್ಲೇಷಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ.
ಐದನೆಯ ಬಹುಮಾನ : ಒಂದು ಸಾವಿರ ರೂಪಾಯಿಗಳು ಮತ್ತು ಡಿಜಿಟಲ್ ಪ್ರಮಾಣಪತ್ರ
ಮಹೇಂದ್ರ ಸಂಕಿಮನೆ ಅವರ ಜೋತು ಬಿದ್ದ ಬಿಳಲು
ಪ್ರಬಂಧದ ಕುರಿತು ತೀರ್ಪುಗಾರರ ನುಡಿ: ತಮ್ಮ ಬಾಲ್ಯದ ಸುಂದರ ನೆನಪೊಂದನ್ನು ಜೀವಂತವಾಗಿರಿಸಿಕೊಳ್ಳಲು ಬೋನ್ಸಾಯಿ ಮರದ ಮೊರೆ ಹೋಗುವುದು ಈ ಪ್ರಬಂಧದಲ್ಲಿ ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಶ್ರೀಮಂತ ಅನುಭವದ ಕಥನ. ಪ್ರಬಂಧಕಾರರು ಆಲದ ಗಿಡವೊಂದನ್ನು ಬೋನ್ಸಾಯ್ ಪ್ರಕಾರದಲ್ಲಿ ತಂದು ಕುಂಡದಲ್ಲಿ ನೆಟ್ಟು ಆಲದ ಮರದ ನೆನಪಿನ ಬಿಳಲು ಬಿಚ್ಚಿಕೊಂಡು ಹೆಮ್ಮರದ ನೆರಳಲ್ಲಿ ಇಳಿಬಿದ್ದು ನೇತಾಡುವ ನೆನಪಿನ ಬೇರನ್ನು ಒಮ್ಮೆ ಜೀಕುವ ಯತ್ನ ಮಾಡಿದ್ದಾರೆ. ಆ ಆಲದ ಮರ ವಯೋವೃದ್ಧ ನಂತಿತ್ತು .ಯಾವ ಗೌರವವಿಲ್ಲದಿದ್ದರೂ ಪೂಜೆ ಪುನಸ್ಕಾರ ಅಧಿಕಾರದ ಹೊರತಾಗಿಯೂ ಹುಡುಗರ ಆತ್ಮೀಯತೆ ಅದಕ್ಕಿತ್ತು. ಆ ಮರಕ್ಕೆ ನಿರ್ಮಿಸದಿದ್ದರೂ ಅದು ಬಾ ಎಂದು ಕರೆಯುತ್ತಿತ್ತು ಶಾಲೆಯ ಚೀಲವನ್ನು ಅದರ ಬುಡಕ್ಕೆ ಅದರ ಸುಪರ್ದಿಗೆ ಕೊಟ್ಟು ಒಮ್ಮೆ ಅದರ ಜೋತು ಬಿದ್ದ ಬಾವಿ ಹಗ್ಗದಂಥ ಬಿಳಲು ಹಿಡಿದು ನಾಲ್ಕಾರು ಬಾರಿ ಜೀಕಿ ಹರ್ಷಿಸಿದ ಬಳಿಕವೇ ಮುಂದೆ ಸಾಗುವುದು ಹೀಗೆ ಸಾಗುವ ಬಾಲ್ಯದ ನೆನಪುಗಳ ಮೆರವಣಿಗೆ ಪ್ರಬಂಧದುದ್ದಕ್ಕೂ ದೃಶ್ಯ ವೈಭವವನ್ನು ಕಣ್ಮುಂದೆ ಕಟೆಯುತ್ತಾ ಹೋಗುತ್ತದೆ ಮಕ್ಕಳು ಮನೆಗೆ ಬಾರದಿದ್ದಾಗ ಸಿಟ್ಟಿಗೆದ್ದ ( ಮೂಡು ಖರಾಬಾದ) ಅಪ್ಪ ಮರದ ಬುಡದಲ್ಲಿ ಗೋಚರಿಸುತ್ತಾನೆ . ಮಕ್ಕಳಿಗೆ ಬಾರಿಸಲು ಪಕ್ಕದ ಕಾಂಗ್ರೆಸ್ ಗಿಡವನ್ನು ಮುರಿಯುತ್ತಾನೆ ಆಗ ಮಕ್ಕಳು ಕಾಲಿಗೆ ಬುದ್ಧಿ ಹೇಳುತ್ತಾರೆ ಮನೆಯತ್ತ ದೌಡಾಯಿಸುತ್ತಾರೆ.ಸರಗೋಲು ಅಂಗಳ ದಾಟಿ ಮನೆ ಗೋಡೆ ಮುಟ್ಟಿದರೆ ಆಯಿತು ಅಪ್ಪನ ಕೋಪದ ಭೂತ ತುಳಸಿಕಟ್ಟೆ ದಾಟಿ ಬರುವ ಹಾಗಿಲ್ಲ. ಅಲ್ಲಿ ಬಂದರೂ ಮೈಮುಟ್ಟುವಂತಿಲ್ಲ. ಹತ್ತಿರ ಬಂದರೆ "ಅಮ್ಮ ನೋಡೆ.. ಅಪ್ಪ ಹೊಡೆಯಲು ಬಂದ" ಎಂದು ಕಿರುಚಿದರಾಯಿತು ಬಾಯಿ ಇದ್ದರೆ ತಾಯಿ ಇದ್ದ ಹಂಗೆ ಅಮ್ಮ ದೇವರ ಮುಂದೆ ಇನ್ನು ದೇವರು ಉಂಟೆ? ಅಪ್ಪನ ಭೂತ ಅಡಗುವುದು ...ಅಪ್ಪ ಇವರ ಪಾಟಿ ಚೀಲ ಹೊತ್ತ ವಿಧೇಯ ವಿದ್ಯಾರ್ಥಿಯಾಗಿ ಬಿಡುವನು.... ಹೀಗೆ ಮಕ್ಕಳ ಮನೋಲೋಕದ ಕ್ಷಣಗಳನ್ನು ಸುಂದರವಾಗಿ ಹೆಣೆದು ಸಂತೋಷ ನೀಡುವ ಪ್ರಬಂಧಕಾರ ಈಚೆಗೆ 23ವರ್ಷಗಳ ಹಿಂದೆ ಆ ಬೃಹತ್ ಆಲದ ಮರದ ಏಣಿಯೊಂದು ಕುಸಿದು ವಿದ್ಯುತ್ ತಂತಿಯ ಮೇಲೆ ಒರಗಿತ್ತು. ಅದು ವಯೋವೃದ್ಧ ನಿಗೆ ಪಾರ್ಶ್ವವಾಯು ಬಡಿದಂತೆ ಎಂದು ವರ್ಣಿಸುತ್ತಾರೆ ಆಲದಮರ ಅಳಿದರೂ ನೆನಪು ಅಳಿಯದೆ ಮತ್ತೆ ಅಕ್ಷರವಾಗಿ ಅರಳಿದೆ ಆಲವರಳಿ ಅಮರವಾಗಿದೆ ಎನ್ನುತ್ತಾರೆ. ಕುಬ್ಜ ವಟ ಕುಡಿಯ ಒಡಲಲ್ಲಿ ಹೂತುಹೋಗಿರುವ ಸುಂದರ ಸಾಮ್ರಾಜ್ಯವನ್ನೇ ತೆಗೆದು ತೋರಿಸುವ ಈ ಪ್ರಬಂಧ ಲಲಿತ ಪ್ರಬಂಧದ ಸಾಧ್ಯತೆಗಳನ್ನೆಲ್ಲ ಅಳವಡಿಸಿಕೊಂಡು ಯಶಸ್ವಿಯಾಗಿದೆ.
ಮೇಲಿನ ಐದು ಪ್ರಬಂಧಗಳಲ್ಲದೆ ಲಲಿತ ಪ್ರಬಂಧ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡು ಪ್ರಯತ್ನ ಶೀಲರಾಗಿರುವ ಮತ್ತು ಭರವಸೆ ಹುಟ್ಟಿಸಿರುವ ಇನ್ನೂ ಕೆಲವು ಪ್ರಬಂಧಗಳನ್ನು ಹೆಸರಿಸಬಹುದು.
ಅವುಗಳೆಂದರೆ :
೬. ಸಯ್ಯದ್ ಫೈಝುಲ್ಲಾ (ಸಂತೆಬೆನ್ನೂರು ಫೈಜ್ನಟ್ರಾಜ್) ಅವರ ‘ಕಾಲು’ಯ ತಸ್ಮೈ ನಮಃ
೮. ವಾಣಿ ಅವರ ನಾ ಬಯಸುವ ಏಕಾಂತ - ಒಂದು ಲಹರಿ
೯. ದಿವ್ಯ ಪೂಜಾರಿ ಅವರ ಚಪ್ಪಲಿಗಳು
೧೦. ಮಂಜುಳಾ ದೇವಿ ಅವರ ಚುಕ್ಕಿ ’ಯೊಡನೆ ಚಕ್ಕಂದ...!!
೧೧. ಕೆ. ಪಿ. ಸತ್ಯನಾರಾಯಣ ಅವರ ಮುಂಜಾನೆದ್ದು
೧೨. ಆರತಿ ಘಟಿಕಾರ್ ಅವರ ಎಫ್ ಬಿ ಲಾಕ್ ಡೌನ್
೧೩. ಪ್ರೇಮ್ ಶೇಖರ್ ಅವರ ಮಳೆಯೊಂದು ರಾಗ ನೂರೊಂದು
೧೪. ಪವನಜ Bellippady ಅವರ ಶಾಕಾಹಾರಿಯೋ ಶಾಖಾಹಾರಿಯೋ?
೧೫. ನರೇಂದ್ರ ಎಸ್ ಗಂಗೊಳ್ಳಿ ಅವರ ಬಿಟ್ಟೆನೆಂದರೂ ಬಿಡದೀ ಭಿಡೆ
೧೬. ಚಿತ್ರಾ ರಾಮಂಚಂದ್ರನ್ ಅವರ ಕಂತೆ ಪುರಾಣ
೧೭. ಶೀಲಾ ಗೌಡರ್ ಅವರ ಸೊಳ್ಳೆ ಕಿರಿದೆನ್ನಬಹುದೆ
೧೮. ಪ್ರಥಮ್ ಶೇಟ್ ಅವರ ಬಣ್ಣ ನನ್ನ ಒಲವಿನ ಬಣ್ಣ
೧೯. ಎಸ್ ಗಣೇಶ್ ನಾಯಕ್ ಮಂಜೇಶ್ವರ ಅವರ ಟಿಫನ್ನೋಪನಿಷತ್
೨೦. ಕಮಲಾಕ್ಷಿ ಸಿ ಆರ್ ಅವರ ಕಾಫಿ
೨೧. ಸ್ಮಿತಾ ಭಟ್ ಅವರ ಆಟತಿ ಮನೆ ಎಂಬ ಪರಕಾಯ ಪ್ರವೇಶ
೨೩. ಸುಮಾ ಕಿರಣ್ ಅವರ ಸಹಿಷ್ಣುತೆ
೨೪. ರಂಜಿತಾ ಹೆಬ್ಬಾರ್.ಎಮ್ ಅವರ ಮೂಷಿಕವಧೆ
೨೫. ಶ್ರೀನಿವಾಸನ್ ಯತಿರಾಜನ್ ಅವರ ಪುಸ್ತಕವೂ ಅಂತರ್ಜಾಲವೂ
೨೬. ಗಾಯತ್ರಿ ಏನ್ ಅವರ ಬಚ್ಚಲು ಮನೆ ಎಂಬ ಬೆಚ್ಚನೆಯ ಭಾವ
೨೭. ಸಾಯಿಲಕ್ಷ್ಮಿ air ಅವರ ಪಾತ್ರೆಗಳ ಪಾತ್ರ
೨೮. ಸುಶ್ಮಿತಾ ನೇರಳಕಟ್ಟೆ ಅವರ ನಾನು ಮತ್ತು ಹೋಂ ವರ್ಕ್
೨೯. 'ಸಮನ್ವಿತಾ' ಅವರ ಮಾತಿನ ಗಮ್ಮತ್ತು
೩೦. ಗಣಪತಿ ಹೆಗಡೆ ಅವರ ಮಾರ್ನಿಂಗ್ ವಾಕ್
....ಹೀಗೆ ಕೆಲವು ಪ್ರಬಂಧಗಳನ್ನು ಹೆಸರಿಸಬಹುದು. ಸಾಹಿತ್ಯಿಕ ಪ್ರಕಾರವೊಂದು ಬೆಳೆಯಬೇಕಾದರೆ ಸಹ್ರದಯ ಮೌಲ್ಯ ಮಾಪನ ಹಾಗೂ ಅದನ್ನು ಪುಷ್ಟೀಕರಿಸುವ ಓದು ,ಅಧ್ಯಯನ ಹಾಗೂ ಜೀವನಾನುಭವಗಳನ್ನು ಸ್ವಯಂನಿಯಂತ್ರಣದಲ್ಲಿ ವಿವರಿಸುವ ಸಾಹಿತ್ಯಿಕ ಶಿಸ್ತಿನ ಪಾಕವಿಧಾನ .....ಇವುಗಳೆಲ್ಲಾ ಅಗತ್ಯ. ಮುಂಬರುವ ದಿನಗಳಲ್ಲಿ ಈ ಎಲ್ಲ ಪ್ರಬಂಧಕಾರರು ಅಳವಡಿಸಿಕೊಂಡು ಪ್ರತಿಯೊಬ್ಬರೂ ಬಹುಮಾನ ಪಡೆಯುವಂತಾಗಲಿ ಎಂದು ಹಾರೈಸುತ್ತ ಈ ಸಾರಸ್ವತ ಅವಕಾಶವನ್ನು ನನಗೆ ಒದಗಿಸಿದ ಪ್ರತಿಲಿಪಿಯ ಪ್ರತಿಯೊಬ್ಬರನ್ನು ಕೃತಜ್ಞತೆಯಿಂದ ನೆನೆದು ನನ್ನ ಮಾತಿಗೆ ವಿರಾಮ ನೀಡುತ್ತಿದ್ದೇನೆ. - ಭುವನೇಶ್ವರಿ ಹೆಗಡೆ
ಎಲ್ಲಾ ವಿಜೇತರಿಗೆ ಶುಭಾಶಯಗಳು. ಮೇಲೆ ನಮೂದಿಸಲಾದ ಕೃತಿಗಳ ಕರ್ತೃಗಳಿಗೆ ಡಿಜಿಟಲ್ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು.
ಅಕ್ಷಯ್ ಬಾಳೆಗೆರೆ