ನಾಯಿ ಮನುಷ್ಯನ ಅತ್ಯುತ್ತಮ ಗೆಳೆಯ ಅಂತ ಹೇಳಿಕೆ ಇದೆ. ಇದು ಮನುಷ್ಯನೇ ಹೇಳಿದ್ದು. ನಾಯಿಗಳಿಗೇನಾದರೂ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವುದಕ್ಕೆ ಆಗಿದ್ದರೆ ಬಹುಶಃ ಅವು ಮನುಷ್ಯ ನಮ್ಮ ಬದ್ಧ ವೈರಿ ಅಂದು ಬಿಡುತ್ತಿದ್ದವೇನೋ? ಹೀಗೊಂದು ಆಲೋಚನೆಯನ್ನುಂಟು ಮಾಡಿದೆ ಕೊಲ್ಕತ್ತಾದ ಬೀದಿನಾಯಿಗಳ ಮೇಲೆ ನಡೆದ ಒಂದು ಸಂಶೋಧನೆ. ನಗರದ ಜನ ನಾಯಿಗಳೆಂದರೆ ಬೆಚ್ಚಿ ಬೀಳುತ್ತಾರಷ್ಟೆ! ಸವಿನಿದ್ರೆ ಸವಿಯುವ ಹೊತ್ತಿನಲ್ಲಿ ಎಚ್ಚರವಾಗಿ ಬೊಗಳುವ ಇವುಗಳು ರಾತ್ರಿಪಾಳಿಯಲ್ಲೇ ಬದುಕುವವರಿಗೂ ಅಸಹನೀಯವೆನ್ನಿಸುತ್ತವೆ. ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಎಜ್ಯುಕೇಶನಲ್ ರೀಸರ್ಚ್ (ಐಐಎಸ್ಇಆರ್)ನ ಜೀವವಿಜ್ಞಾನಿ ...

