pratilipi-logo ಪ್ರತಿಲಿಪಿ
ಕನ್ನಡ

ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯ ‘ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ’ - ವಿಜೇತರಿಗೆ ಅಭಿನಂದನೆಗಳು!

11 ಏಪ್ರಿಲ್ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಸೂಪರ್ ಸಾಹಿತಿ ಅವಾರ್ಡ್ಸ್-6 ಸ್ಪರ್ಧೆಯಲ್ಲಿ ವಿಶೇಷವಾಗಿ, ಕನ್ನಡದ ಖ್ಯಾತ ಕಾದಂಬರಿಕಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಸ್ಮರಣಾರ್ಥ ಪುರಸ್ಕಾರ ವಿಭಾಗವನ್ನು ಪರಿಚಯಿಸಲಾಗಿತ್ತು. ಶ್ರೀಮತಿ ಎಚ್. ಜಿ. ರಾಧಾದೇವಿಯವರ ಪುತ್ರಿ ಶ್ರೀಮತಿ ಶ್ರೀಲಕ್ಷ್ಮಿ, ವೀಣಾ ನಾಯಕ್ ಮತ್ತು ಅವರ ಬಳಗದ 11 ತೀರ್ಪುಗಾರರು ಸ್ಪರ್ಧೆಯ ಕೃತಿಗಳನ್ನು ಓದಿ ‘ಶ್ರೀಮತಿ ಎಚ್. ಜಿ. ರಾಧಾದೇವಿ ಸ್ಮರಣ ಪುರಸ್ಕಾರ’ ವಿಭಾಗದ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುತ್ತಾರೆ. ಎಲ್ಲಾ ವಿಜೇತರಿಗೂ ಅಭಿನಂದನೆಗಳು.

 

ಸೂಪರ್ ಸಾಹಿತಿ ಅವಾರ್ಡ್ಸ್- 6 ಸ್ಪರ್ಧೆಯಲ್ಲಿ ಈ ವಿಶೇಷ ಬಹುಮಾನವನ್ನು ಘೋಷಿಸಿ ನಮ್ಮೊಂದಿಗೆ ಕೈ ಜೋಡಿಸಿರುವ ಶ್ರೀಮತಿ ಶ್ರೀಲಕ್ಷ್ಮಿ ಮತ್ತು ವೀಣಾ ನಾಯಕ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕನ್ನಡದ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಎಚ್. ಜಿ. ರಾಧಾದೇವಿಯವರ ಹೆಸರಿನಲ್ಲಿ ನೀಡುತ್ತಿರುವ ಈ ಪುರಸ್ಕಾರವು ಪ್ರತಿಲಿಪಿಯ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಕನಸು ಹೊತ್ತಿರುವ ನೂರಾರು ಯುವ ಲೇಖಕ/ಲೇಖಕಿಯರಿಗೆ ಆಶೀರ್ವಾದಪೂರ್ವಕ ಪ್ರೋತ್ಸಾಹ ನೀಡಿದಂತಾಗುತ್ತದೆ. ಜೊತೆಗೆ ಸ್ಪರ್ಧೆಯ ಕೃತಿಗಳನ್ನು ಕೂಲಂಕಷವಾಗಿ ಓದಿ, ವಿಶ್ಲೇಷಿಸಿ ವಿಜೇತ ಕೃತಿಗಳನ್ನು ಆಯ್ಕೆ ಮಾಡಿರುವ ಎಲ್ಲಾ ತೀರ್ಪುಗಾರರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. 

 

ವಿಜೇತ ಕೃತಿಗಳ ವಿವರ:

 

ಪ್ರಥಮ ಬಹುಮಾನ: ಪ್ರಖ್ಯಾ ಅವರ ಮೃತ್ಯೋರ್ಮಾ ಅಮೃತಂಗಮಯ

 

ದ್ವಿತೀಯ ಬಹುಮಾನ: ವೀಣಾ ವಿನಾಯಕ ಅವರ ಇಷ್ಟೇ ಸಾಕು ಈ‌ ಜನ್ಮಕೆ

 

ತೃತೀಯ ಬಹುಮಾನ: ಶಿವಶಂಕರ್ ಎಸ್. ಜಿ ಅವರ ಓ..ನನ್ನ ಚೇತನ!

 

ಸಮಾಧಾನಕರ ಬಹುಮಾನಗಳು:

 

1. ಸವಿತಾ ರಮೇಶ್ ಅವರ ಮೋಹದ ಬಲೆ

2. ಭಾರತಿ ಕೃತಿಕಾ ಅವರ ನೀನಿಲ್ಲದೆ

3. ನಯನಾ ಭಟ್ ಅವರ ಅನ್ವೇಷಣೆ ನನ್ನೊಲವ ಹುಡುಕಾಟದಲ್ಲಿ

4. ರಮ್ಯಾ ವಿಜಿತ್ ಅವರ ಯದ್ಭಾವಂ ತದ್ಭವತಿ

5. ಅನಿತಾ ಹೆಚ್. ಅವರ ಈ ಪ್ರೀತಿ ಒಂಥರಾ



ಸ್ಪರ್ಧೆಯ ವಿಜೇತ ಕೃತಿಗಳ ಕುರಿತು ಆಯೋಜಕರು ಮತ್ತು ತೀರ್ಪುಗಾರರ ಅನಿಸಿಕೆ:

 

ಪ್ರಿಯ ಸ್ನೇಹಿತರೇ,

 

ಖ್ಯಾತ ಲೇಖಕಿ ಶ್ರೀಮತಿ H G ರಾಧಾದೇವಿಯವರ ಹೆಸರಿನಲ್ಲಿ 2019ರಿಂದ ಫೇಸ್ಬುಕ್ ನ ವಿವಿಧ ಸಾಹಿತ್ಯದ ಗ್ರೂಪ್’ಗಳಲ್ಲಿ ಕಥಾ ಸ್ಪರ್ಧೆ ನಡೆಸುತ್ತಾ ಬಂದಿದ್ದೆವು. ನಮ್ಮ ತಾಯಿಯವರ ಸಾಹಿತ್ಯದ ಮಾಧ್ಯಮ ಕಾದಂಬರಿ ಆದ್ದರಿಂದ ಕಾದಂಬರಿ ಪ್ರಕಾರದಲ್ಲಿ ಪ್ರತಿಭಾನ್ವಿತ ಉದಯೋನ್ಮುಖ ಲೇಖಕರಿಗೆ ಪ್ರೋತ್ಸಾಹ ಕೊಡುವ ವಿಚಾರ ತಲೆಯಲ್ಲಿ ಬಂತು. ಈ ದಿಸೆಯಲ್ಲಿ ನನ್ನ ಉದ್ದೇಶಕ್ಕೆ ಒತ್ತಾಸೆಯಾಗಿ ನಿಂತದ್ದು ಪ್ರತಿಲಿಪಿ. ಲಕ್ಷಾಂತರ ಓದುಗರು ಹಾಗು ಸಾವಿರಾರು ಬರಹಗಾರರನ್ನು ಒಳಗೊಂಡ ಪ್ರತಿಲಿಪಿ ಸಂಸ್ಥೆಯವರು ತಮ್ಮ 'ಸೂಪರ್ ಸಾಹಿತಿ ಅವಾರ್ಡ್ಸ್ - 6' ಸ್ಪರ್ಧೆಗೆ ಬಂದ ಕಾದಂಬರಿಗಳನ್ನು ನಮಗೆ ಕೊಟ್ಟರು.

 

ನನ್ನ ಸಾಹಿತ್ಯ ಸಂಬಂಧಿ ಪ್ರತಿಯೊಂದು ಕಾರ್ಯಗಳಲ್ಲೂ ಕೈ ಜೋಡಿಸಿ, ನನಗೆ ಬೆಂಬಲ ನೀಡುವ ಶ್ರೀಮತಿ ವೀಣಾ ನಾಯಕ್ ಮೇಡಂ ಅವರು ಈ ಬಾರಿ ಸಹಾ ನನ್ನೊಂದಿಗೆ ಇದ್ದಾರೆ. ಅವರು ತಾವಾಗಿಯೇ ಒಂದು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಅಂತೆಯೇ ನಮ್ಮ ಸ್ಪರ್ಧೆಯ ದ್ವಿತೀಯ ಬಹುಮಾನದ ಪ್ರಾಯೋಜಕರು ಶ್ರೀಮತಿ ವೀಣಾ ನಾಯಕ್ ಅವರು.

 

ನಮ್ಮ ಈ ಕಾರ್ಯ ಯಶಸ್ವಿಯಾಗಲು ನಮ್ಮೊಂದಿಗೆ ಕೈ ಜೋಡಿಸಿದ ನಮ್ಮ ತೀರ್ಪುಗಾರರಿಗೂ ಅನಂತ ಧನ್ಯವಾದಗಳು. ಈ ಕಾದಂಬರಿಗಳನ್ನು ಓದಿ, ಪ್ರತಿಯೊಂದು ಕೃತಿಯಲ್ಲಿನ ಉತ್ತಮ ಅಂಶಗಳನ್ನು ಪಟ್ಟಿಮಾಡಿ, ಅಂಕಗಳನ್ನು ಕೊಟ್ಟು ಬಹುಮಾನಕ್ಕಾಗಿ ಆಯ್ಕೆ ಮಾಡಿದ ನಮ್ಮ ತೀರ್ಪುಗಾರ್ತಿಯರು-

 

1. ಶ್ರೀಮತಿ ಮಾಲತಿ ಮುದಕವಿ

2. ಶ್ರೀಮತಿ ವಿದ್ಯಾ ಶಿರಹಟ್ಟಿ

3. ಶ್ರೀಮತಿ ರಾಧಾ ಶ್ಯಾಮರಾವ್

4. ಶ್ರೀಮತಿ ಕವಿತಾ ಅಭಯಂ

5. ಶ್ರೀಮತಿ ಇಂದಿರಾ ಪ್ರಸಾದ್

6. ಶ್ರೀಮತಿ ಉಷಾ ಗದ್ದಗಿಮಠ

7. ವಿನುತಾ ಹಂಚಿನಮನಿ

8. ಪುಷ್ಪಾ ಹಾಲಭಾವಿ 

9. ನಳಿನಿ ಭೀಮಪ್ಪ

10. ದೀಪಿಕಾ ಚಾಟೆ 

11. ಶ್ರೀಮತಿ ಅನುಪಮಾ ರವೀಂದ್ರನಾಥ್

 

ಸಕಾಲದಲ್ಲಿ ಇಷ್ಟೆಲ್ಲ ಕೃತಿಗಳನ್ನು ಓದಿ, ವಿಶ್ಲೇಷಿಸಿದ ನಮ್ಮ ಎಲ್ಲಾ ತೀರ್ಪುಗಾರ್ತಿಯರಿಗೆ ನಮನಗಳು.

 

ಸ್ಪರ್ಧೆಗೆ ಬಂದ ಕೃತಿಗಳ ಓದು ಒಂದು ಅತ್ಯಂತ ವಿಭಿನ್ನ ವಿಶಿಷ್ಟ ಅನುಭವ ಕೊಟ್ಟಿತು. ಬಹುತೇಕ ಲೇಖಕ/ಲೇಖಕಿಯರ ಪ್ರಯತ್ನ ಉತ್ತಮವಾಗಿದೆ. ಹೊಸ ಮಾದರಿಯ ಕಥಾವಸ್ತು, ನಿರೂಪಣೆಯಲ್ಲಿ ಹೊಸತನ, ಇಂದಿನ ಸಮಾಜದ ಸಮಸ್ಯೆಗಳ ದರ್ಶನ  ಇತ್ಯಾದಿ ಪ್ರತಿಯೊಂದರಲ್ಲೂ ನವೀನತೆ ಇದೆ.

 

ಇನ್ನು ಬಹುಮಾನ ವಿಜೇತ ಕೃತಿಗಳ ವಿವರ-

 

ಮೊದಲ ಬಹುಮಾನ ಪಡೆದ ಪ್ರಖ್ಯಾ ಅವರ ‘ಮೃತ್ಯೋರ್ಮ ಅಮೃತಂಗಮಯ’ ಕಾದಂಬರಿಯ ವಸ್ತುವಿಷಯವಾದ ಸಸ್ಯ ಶಾಸ್ತ್ರ, ಕಾಪಿ ರೈಟ್ ಆಕ್ಟ್ ವಗೈರೆ ವಿಷಯವೂ ಹೊಸದು. ಅದನ್ನು ಪ್ರಸ್ತುತ ಪಡಿಸಿರುವ ರೀತಿ ಕೂಡ ಚೆನ್ನಾಗಿದೆ. ನಡು ನಡುವೆ ಇರುವ ಟ್ವಿಸ್ಟ್ ಗಳೂ ಕಥೆಯ ಆಕರ್ಷಣೆ ಹೆಚ್ಚಿಸಿವೆ ಆದ್ದರಿಂದಲೇ ಈ ಕಾದಂಬರಿಗೆ ಪ್ರಥಮ ಬಹುಮಾನ.

 

ಇನ್ನು ಎರಡನೇ ಬಹುಮಾನ ಪಡೆದ ವೀಣಾ ವಿನಾಯಕ್ ಅವರ ‘ಇಷ್ಟೇ ಸಾಕು ಈ ಜನ್ಮಕೆ’ ಕಾದಂಬರಿಯ ಶೈಲಿ ತುಂಬಾನೇ ಚೆನ್ನಾಗಿದೆ . ಮಲೆನಾಡಿನ ಬದುಕಿನ ಸರಳ ಸುಂದರ ಚಿತ್ರಣ. ಸಿರಿವಂತ, ಬಡ ಕುಟುಂಬ, ಹಳ್ಳಿ - ಪಟ್ಟಣ, ಆಧುನಿಕ - ಸಾಂಪ್ರದಾಯಿಕ ಎರಡೂ ಕುಟುಂಬಗಳ ಚಿತ್ರಣ ಇಲ್ಲಿದೆ.

 

ಮೂರನೇ ಬಹುಮಾನ ಪಡೆದ ಜಿ. ಎಸ್. ಶಿವಶಂಕರ್ ಅವರ ‘ಓ ನನ್ನ ಚೇತನ’ ಕಾದಂಬರಿಯ ವಸ್ತು ಹಾಗು ನಿರೂಪಣೆ ಎರಡೂ ಹೊಸದು, ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಭಾರತೀಯ, ಆತ ಭೌತ ಶಾಸ್ತ್ರದ ಪ್ರಾಧ್ಯಾಪಕ. ಪರಕಾಯ ಪ್ರವೇಶವನ್ನು ವೈಜ್ಞಾನಿಕವಾಗಿ ಸಾಧಿಸಿ, ಲೋಕ ಕಲ್ಯಾಣಕ್ಕಾಗಿ ಅದನ್ನು ಬಳಸುವುದು ಈ ಕಥಾವಸ್ತುವಿನ ಪರಿಕಲ್ಪನೆಯೇ ಹೊಚ್ಚ ಹೊಸದು. ಟಿವಿ ವರದಿಗಾರನೊಬ್ಬ ಈ ರಹಸ್ಯದ ಬೆನ್ನು ಹತ್ತಿ ಶೋಧಿಸಲು ಯತ್ನಿಸುವುದು ಕಥೆಗೆ ಕುತೂಹಲಕಾರಿ ಟ್ವಿಸ್ಟ್ ನೀಡಿದೆ.

 

ಈ ಮೂರೂ ಕಾದಂಬರಿಗಳಲ್ಲದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಸಮಾಧಾನ ಬಹುಮಾನಕ್ಕೆ ಪಾತ್ರವಾದ ಐದು ಕಾದಂಬರಿಗಳು ಸಹಾ ಇವೆ.

 

ಸಿಂಗಲ್ ಪೇರೆಂಟ್ ಆಗಿ ಬದುಕಲು ನಿರ್ಧರಿಸುವ ಹೆಣ್ಣಿನ ಸ್ವಾಭಿಮಾನದ ಕಥೆ ಚಿತ್ರಿಸುವ ಸವಿತಾ ರಮೇಶ್ ಅವರ ‘ಮೋಹದ ಬಲೆ’.

 

ತೀರ್ಥಯಾತ್ರೆಯ ಸಂದರ್ಭದಲ್ಲಿ ಒಟ್ಟಾದ ಗೃಹಿಣಿಯರ ಕಥೆಗಳ ಗುಚ್ಛವಾದ ಭಾರತಿ ಕೃತ್ತಿಕಾ ಅವರಾ ‘ನೀನಿಲ್ಲದೆ’ ಕಾದಂಬರಿ; ಇವರೆಲ್ಲರೂ ಮನೆಗಾಗಿ ಏನೆಲ್ಲಾ ಮಾಡಿದರೂ, ಗಂಡನ ಹಾಗು ಸೊಸೆಯಂದಿರು ಅಸಡ್ಡೆಗೆ ಒಳಗಾದವರು. ಆದರೆ ಈಗ ಮಗನ ಸಹಾಯದಿಂದ ಇಲ್ಲಿ ಬಂದು ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಎಂಜಾಯ್ ಮಾಡುತ್ತಾರೆ. ಹಾಗು ಮನೆಯವರಿಗೆ ವಿಶೇಷವಾಗಿ ಗಂಡನಿಗೆ ಇವರ ಕೊರತೆ ಅನುಭವವಾಗುವ ಕಥಾ ವಸ್ತುವಿನದು.

 

ನಯನಾ ಭಟ್ ಅವರ ‘ಅನ್ವೇಷಣೆ’ ಜನ್ಮಾಂತರದ ಪ್ರೇಮಿಗಳ ಕಥೆ.

 

ರಮ್ಯಾ ವಿಜಿತ್ ಅವರ ‘ಯದ್ಭಾವಂ ತದ್ಭವತಿ’ ಕಾದಂಬರಿಯ ಸಾರಾಂಶ ಬೇರೆಯವರಿಗೆ ಒಳಿತು ಆಶಿಸಿದರೆ, ತಮಗೂ ಒಳಿತೇ ಆಗುತ್ತದೆ ಎನ್ನುವ ನೀತಿ ಇಷ್ಟವಾಯ್ತು. ನಾಯಕಿ ಸರಯುವಿನ ನಿಸ್ವಾರ್ಥ ಮನೋಭಾವ ಹಾಗು ವರ್ಮಾ ಕುಟುಂಬದ ಒಳ್ಳೆತನ ಇಷ್ಟವಾಗುತ್ತದೆ. 

 

ಇನ್ನು ಅನಿತಾ ಅವರ ‘ಈ ಪ್ರೀತಿ ಒಂಥರಾ’ ಕಾದಂಬರಿಯ ಕಥೆಯಲ್ಲಿ ತಾಜಾತನವಿದೆ ಮಾಮೂಲು ಪ್ರೇಮ ಕಥೆಗಳಿಗಿಂತ ಭಿನ್ನವಾಗಿದೆ ಕೂಡ.

 

ಈ ಐದೂ ಕಾದಂಬರಿಕಾರರು ಕಥನ ಕಲೆಯನ್ನು ಇನ್ನೂ ಒಂದಷ್ಟು ಪಳಗಿಸಿಕೊಂಡರೆ ಮತ್ತಷ್ಟು ಎತ್ತರಕ್ಕೆ ಬೆಳೆಯಬಲ್ಲರು. 

 

ಇನ್ನು ಸ್ಪರ್ಧೆಗೆ ಬಂದ ಉಳಿದ ಕಾದಂಬರಿಗಳ ಬಗ್ಗೆ ಹೇಳುವುದಾದರೆ, ಬಹಳಷ್ಟು ಬರಹಗಾರರ ಪ್ರಯತ್ನ ಉತ್ತಮವಾಗಿಯೇ ಇತ್ತು. ಕಾದಂಬರಿಯ ವಿಷಯದ ಆಯ್ಕೆಯೇ ಸಾಕು ಇವರೆಲ್ಲ ಇದರಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವ ಸಾಕ್ಷಿ. ಕೆಲವರು ವ್ಯಾಕರಣದೋಷಗಳು ಹಾಗು ಭಾಷಾ ಶುದ್ಧಿಯ ಕಡೆಗೆ ಇನ್ನಷ್ಟು ಗಮನ ಕೊಡಬೇಕಾಗಿದೆ(ಇದು ಎಲ್ಲರಿಗೂ ಅನ್ವಯಿಸಿ ಹೇಳಿದ್ದಲ್ಲ).

 

ವಿಜೇತರಿಗೆ ಮತ್ತೊಮ್ಮೆ ಅಭಿನಂದನೆಗಳು, ಪ್ರಯತ್ನಿಸಿದವರಿಗೆ ಮುಂದಿನ ಸ್ಪರ್ಧೆಗೆ ಶುಭಹಾರೈಕೆಗಳು. ಸುಂದರ ಸರ್ಟಿಫಿಕೇಟ್’ಗಳನ್ನು ಮಾಡಿಕೊಟ್ಟ ಶ್ರೀಮತಿ ವಿದ್ಯಾ ಎಂ ಹೆಗಡೆಯವರಿಗೆ ಧನ್ಯವಾದಗಳು. ಸಹ ಪ್ರಾಯೋಜಕರಾದ ಶ್ರೀಮತಿ ವೀಣಾ ನಾಯಕ್ ಹಾಗು ತೀರ್ಪುಗಾರರಾದ ನಮ್ಮ ಎಲ್ಲಾ ಲೇಖಕಿಯರಿಗೂ ಧನ್ಯವಾದಗಳು. ಕನ್ನಡ ಸಾಹಿತ್ಯವನ್ನು ಎಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಬೆಳೆಸುತ್ತಿರುವ, ರಾಶಿ ರಾಶಿ ಹೊಸ ಬರಹಗಾರರನ್ನು ಹುಟ್ಟುಹಾಕಿ, ಅವರೆಲ್ಲರಿಗೂ ನಿರಂತರ ಪ್ರೋತ್ಸಾಹ ಕೊಡುತ್ತಿರುವ ಪ್ರತಿಲಿಪಿ ಸಂಸ್ಥೆಗೆ ಅನಂತ ಪ್ರಣಾಮಗಳು.