
ಪ್ರತಿಲಿಪಿಆತ್ಮೀಯ ಸಾಹಿತಿಗಳೇ,
ನಿಮ್ಮಲ್ಲಿ ಹಲವರು ಟಿಡಿಎಸ್ (TDS) ಬಗ್ಗೆ ಮತ್ತು ನಿಮ್ಮ ಗಳಿಕೆ ಅಥವಾ ಬಹುಮಾನಗಳಿಂದ ಏಕೆ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂಬ ಪ್ರಶ್ನೆಗಳನ್ನು ಆಗಾಗ ಕೇಳುತ್ತಿರುತ್ತೀರಿ. ಟಿಡಿಎಸ್ ಎಂದರೇನು, ಅದನ್ನು ಏಕೆ ಅನ್ವಯಿಸಲಾಗುತ್ತದೆ ಮತ್ತು ಪ್ರತಿಲಿಪಿಯಲ್ಲಿನ ವಿವಿಧ ರೀತಿಯ ಪಾವತಿಗಳಿಗೆ ಅದು ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಈ ಬ್ಲಾಗ್ ವಿವರಿಸುತ್ತದೆ.
ಟಿಡಿಎಸ್ ಎಂದರೆ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (Tax Deducted at Source). ಇದು ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಭಾರತ ಸರ್ಕಾರ ರೂಪಿಸಿರುವ ನಿಯಮವಾಗಿದೆ. ಟಿಡಿಎಸ್ ದರ ಮತ್ತು ಅದನ್ನು ಮರುಪಾವತಿ ಪಡೆಯಬಹುದೇ ಎಂಬುದು ನೀವು ಪಡೆಯುವ ಪಾವತಿಯ ಸ್ವರೂಪವನ್ನು ಅವಲಂಬಿಸಿರುತ್ತದೆ.
1. ಲೇಖಕರ ನಿಯಮಿತ ಗಳಿಕೆಗಳು (ಪ್ರತಿ ತಿಂಗಳೂ ನಿಮ್ಮ ಬರಹಗಳಿಂದ ಗಳಿಸುವ ಸಂಪಾದನೆ):
ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ) ಪ್ರತಿಲಿಪಿಯಲ್ಲಿ ನಿಮ್ಮ ಒಟ್ಟು ಗಳಿಕೆಯು ₹30,000/- ತಲುಪಿದಾಗ, ಶೇ.10 ರಷ್ಟು ಟಿಡಿಎಸ್ ಕಡಿತ ಪ್ರಾರಂಭವಾಗುತ್ತದೆ.
ಉದಾಹರಣೆಗೆ: ನೀವು ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಪ್ರತಿ ತಿಂಗಳು ₹5,000 ಗಳಿಸಿದರೆ, ನಿಮ್ಮ ಒಟ್ಟು ಗಳಿಕೆ ₹25,000 ಆಗಿರುತ್ತದೆ. ನೀವು ಸೆಪ್ಟೆಂಬರ್‌ನಲ್ಲಿ ಪುನಃ ₹5,000 ಗಳಿಸಿದಲ್ಲಿ, ನಿಮ್ಮ ಒಟ್ಟು ಗಳಿಕೆ ₹30,000 ತಲುಪುತ್ತದೆ. ಒಮ್ಮೆ ನಿಮ್ಮ ಒಟ್ಟು ಗಳಿಕೆ ಆರ್ಥಿಕ ವರ್ಷದಲ್ಲಿ ₹30,000 ದಾಟಿದ ನಂತರ, ಆ ವರ್ಷದ ನಿಮ್ಮ ಒಟ್ಟು ಗಳಿಕೆಯ ಮೇಲೆ ಶೇ. 10 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ಅಂದರೆ, ₹3,000 (₹30,000 ದ ಶೇ.10) ಟಿಡಿಎಸ್ ರೂಪದಲ್ಲಿ ಕಡಿತಗೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ. ಈ ಉದಾಹರಣೆಯ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಕೇವಲ ₹2,000 ಮಾತ್ರ ನಿಮಗೆ ಪಾವತಿಯಾಗುತ್ತದೆ.
ಮುಂದಿನ ತಿಂಗಳುಗಳಿಂದ ಆರ್ಥಿಕ ವರ್ಷವು ಮುಕ್ತಾಯವಾಗುವವರೆಗೆ ಪ್ರತಿ ತಿಂಗಳ ಗಳಿಕೆಯಿಂದ ಶೇ.10 ರಷ್ಟು ಟಿಡಿಎಸ್ ಅನ್ನು ಕಡಿತಗೊಳಿಸುವುದನ್ನು ಮುಂದುವರಿಸಲಾಗುತ್ತದೆ.
ನೀವು ಚಾರ್ಟರ್ಡ್ ಅಕೌಂಟೆಂಟ್ ಸಹಾಯದೊಂದಿಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಬಹುದು. ರಿಟರ್ನ್ ಪ್ರಕ್ರಿಯೆಯ ಬಳಿಕ, ಕಡಿತಗೊಳಿಸಿದ ಟಿಡಿಎಸ್ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಾಗುತ್ತದೆ.
ಎಲ್ಲಾ ಟಿಡಿಎಸ್ ಪ್ರಮಾಣಪತ್ರಗಳನ್ನು ಪ್ರಸ್ತುತ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮೊದಲು ನೀಡಲಾಗುತ್ತದೆ.
ಯಾವುದೇ ಗಳಿಕೆ ಅಥವಾ ಪಾವತಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಲೇಖಕರು ಆ್ಯಪ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
2. ಸ್ಪರ್ಧೆಯ ಬಹುಮಾನಗಳು:
ಸ್ಪರ್ಧೆಯ ಬಹುಮಾನಗಳಿಗೂ ಟಿಡಿಎಸ್ ಅನ್ವಯವಾಗುತ್ತದೆ, ಆದರೆ ಅದರ ಶೇಕಡಾವಾರು ವಿಭಿನ್ನವಾಗಿರುತ್ತದೆ.
ಒಂದು ಆರ್ಥಿಕ ವರ್ಷದಲ್ಲಿ ನಿಮ್ಮ ಒಟ್ಟು ಬಹುಮಾನದ ಮೊತ್ತ ₹10,000 ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BB ಅಡಿಯಲ್ಲಿ ಶೇ.30 ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಇದರ ಜೊತೆಗೆ, ಸರ್ಚಾರ್ಜ್ ಮತ್ತು ಶೇ.4 ರ ಆರೋಗ್ಯ ಮತ್ತು ಶಿಕ್ಷಣ ಸೆಸ್‌ನಂತಹ ಸರ್ಕಾರಿ ಶುಲ್ಕಗಳಿಗಾಗಿ ಒಂದು ಸಣ್ಣ ಹೆಚ್ಚುವರಿ ಮೊತ್ತವನ್ನು ಕೂಡಾ ಸೇರಿಸಲಾಗುತ್ತದೆ.
ಉದಾಹರಣೆಗೆ: ನೀವು ಒಂದು ಸ್ಪರ್ಧೆಯಲ್ಲಿ ₹5,000 ಗೆದ್ದರೆ, ಆ ಆರ್ಥಿಕ ವರ್ಷದ ₹10,000 ಮಿತಿಯನ್ನು ನೀವು ದಾಟಿಲ್ಲದ ಕಾರಣ ಯಾವುದೇ ಟಿಡಿಎಸ್ ಕಡಿತಗೊಳಿಸಲಾಗುವುದಿಲ್ಲ.
ಅದೇ ಆರ್ಥಿಕ ವರ್ಷದಲ್ಲಿ ನೀವು ಮತ್ತೊಂದು ಸ್ಪರ್ಧೆಯಲ್ಲಿ ₹5,000 ಗೆದ್ದಾಗ, ನಿಮ್ಮ ಒಟ್ಟು ಬಹುಮಾನ ಮೊತ್ತವು ₹10,000 ಆಗುತ್ತದೆ. ಹೀಗಾಗಿ ಟಿಡಿಎಸ್ ಮಿತಿಯನ್ನು ತಲುಪುವುದರಿಂದ, ಒಟ್ಟು ₹10,000/- ದ ಮೇಲೆ ಶೇ.30 ರಷ್ಟು ಟಿಡಿಎಸ್ (ಅಂದರೆ ₹3,000/-) ಅನ್ನು ಎರಡನೇ ಪಾವತಿಯಿಂದ ಕಡಿತಗೊಳಿಸಲಾಗುತ್ತದೆ. ಹೀಗಾಗಿ, ಎರಡನೇ ಸ್ಪರ್ಧೆಯ ₹5,000/- ಬಹುಮಾನದಿಂದ ₹3,000/- ಟಿಡಿಎಸ್ ಕಡಿತಗೊಂಡು, ನಿಮಗೆ ₹2,000/- ನಿಮಗೆ ಜಮೆಯಾಗುತ್ತದೆ.
ಅದೇ ಆರ್ಥಿಕ ವರ್ಷದಲ್ಲಿ ನೀವು ಯಾವುದೇ ಹೆಚ್ಚುವರಿ ಬಹುಮಾನದ ಹಣವನ್ನು ಗೆದ್ದರೆ, ಅದರ ಮೇಲೆ ಸಹ ಶೇ.30 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ ಮತ್ತು ಉಳಿದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ.
ಈ ಶೇ.30 ರ ಕಡಿತವು ಕಡ್ಡಾಯ ಸರ್ಕಾರಿ ತೆರಿಗೆ ನಿಯಮವಾಗಿದ್ದು, ಪಾವತಿ ಪ್ರಕ್ರಿಯೆಗೆ ಮೊದಲು ಅನ್ವಯಿಸಲಾಗುತ್ತದೆ.
ಸೆಕ್ಷನ್ 115BB ಪ್ರಕಾರ, ನಿಮ್ಮ ಒಟ್ಟು ವಾರ್ಷಿಕ ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೂ ಸಹ, ಈ ಟಿಡಿಎಸ್ ಮೊತ್ತವನ್ನು ನಂತರದಲ್ಲಿ ಮರುಪಾವತಿ ಅಥವಾ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಇಂತಹ ಬಹುಮಾನಗಳಿಗೆ ಶೇ.30 ರ ಏಕರೂಪದ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಮತ್ತು ಈ ತೆರಿಗೆ ಅಂತಿಮವಾಗಿರುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಈ ಗಳಿಕೆಗಳನ್ನು "ಇತರೆ ಮೂಲಗಳಿಂದ ಆದಾಯ"(Income from other Sources) ಎಂದು ವರ್ಗೀಕರಿಸಲಾಗುತ್ತದೆ.
ಸ್ಪರ್ಧೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗಾಗಿ, ನೀವು [email protected] ಅನ್ನು ಸಂಪರ್ಕಿಸಬಹುದು.
3. ಐಪಿ (IP) ಒಪ್ಪಂದಗಳು ಮತ್ತು ಸಂಬಂಧಿತ ಪಾವತಿಗಳು:
ಆದಾಯ ತೆರಿಗೆ ಕಾಯಿದೆಯ ಪ್ರಕಾರ, ಕೆಲವು ಪಾವತಿಗಳ ಮೇಲೆ ಶೇ.10 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ. ನಿಮ್ಮ ಪ್ಯಾನ್ (PAN) ಅಡಿಯಲ್ಲಿ ನಿಖರವಾದ ತೆರಿಗೆ ಕಡಿತವನ್ನು ಖಚಿತಪಡಿಸಿಕೊಳ್ಳಲು, ಪ್ರತಿಲಿಪಿಯಲ್ಲಿನ ಎಲ್ಲಾ ಐಪಿ-ಸಂಬಂಧಿತ ಪಾವತಿಗಳ ಮೇಲೆ ಶೇ.10 ರಷ್ಟು ಟಿಡಿಎಸ್ ಅನ್ನು, ಪಾವತಿಯ ಮೊತ್ತವನ್ನು ಲೆಕ್ಕಿಸದೆ, ಕಡಿತಗೊಳಿಸಲಾಗುತ್ತದೆ.
ಒಪ್ಪಂದದಲ್ಲಿ ನಮೂದಿಸಿರುವ ಪಾವತಿ ಮೊತ್ತವು ₹1,000/-, ₹5,000/-, ₹18,000/- ಅಥವಾ ಯಾವುದೇ ಇತರ ಮೊತ್ತವಾಗಿದ್ದರೂ, ಪ್ರತಿ ಪ್ರಕರಣದಲ್ಲಿ ಶೇ. 10 ರಷ್ಟು ಟಿಡಿಎಸ್ ಅನ್ನು ಅನ್ವಯಿಸಲಾಗುತ್ತದೆ. ಈ ಕಡಿತವನ್ನು ನೀವು ನೀಡಿದ ಬ್ಯಾಂಕ್ ಖಾತೆಗೆ ಪಾವತಿಯನ್ನು ಜಮೆ ಮಾಡುವ ಮೊದಲು ಮಾಡಲಾಗುತ್ತದೆ.
ನೀವು ಒದಗಿಸಿದ ಪ್ಯಾನ್ ಗೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ, ಆದ್ದರಿಂದ ನಿಮ್ಮ ಐಟಿಆರ್ (ITR) ಅನ್ನು ಸಲ್ಲಿಸುವಾಗ ನೀವು ಈ ಮೊತ್ತವನ್ನು ಕ್ಲೈಮ್ ಮಾಡಬಹುದು(ಮರುಪಾವತಿ ಪಡೆಯಬಹುದು). ಟಿಡಿಎಸ್ ಕಡಿತದ ವಿವರಗಳು ಆದಾಯ ತೆರಿಗೆ ಪೋರ್ಟಲ್‌ನಲ್ಲಿರುವ ನಿಮ್ಮ ಫಾರ್ಮ್ 26AS ಅಥವಾ AIS ನಲ್ಲಿ ಲಭ್ಯವಾಗುತ್ತವೆ.
ಒಪ್ಪಂದಕ್ಕೆ ಸಹಿ ಹಾಕಿ ಪಾವತಿ ಮೊತ್ತವನ್ನು ಅಂತಿಮಗೊಳಿಸಿದಾಗ, ಪಾವತಿ ಪ್ರಕ್ರಿಯೆಯ ಭಾಗವಾಗಿ ಶೇ.10 ರಷ್ಟು ಟಿಡಿಎಸ್ ಕಡಿತವು ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.
ಯಾವುದೇ ಐಪಿ ಅಥವಾ ಒಪ್ಪಂದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಲೇಖಕರು kannadaip@pratilipi.com ಅನ್ನು ಸಂಪರ್ಕಿಸಬಹುದು.
ಟಿಡಿಎಸ್ ಸಾರಾಂಶ (ಲೇಖಕರಿಗಾಗಿ)
ಗಮನಿಸಿ:
ನೀವು ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಒದಗಿಸದಿದ್ದರೆ, ಅದು ನಿಷ್ಕ್ರಿಯವಾಗಿದ್ದರೆ (ಉದಾಹರಣೆಗೆ - ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲದಿದ್ದರೆ), ಅಥವಾ ಅಮಾನ್ಯವಾಗಿದ್ದರೆ, ಟಿಡಿಎಸ್ ಅನ್ನು ಶೇ.20 ರಿಂದ ಶೇ.30 ರ ಹೆಚ್ಚಿನ ದರದಲ್ಲಿ ವಿಧಿಸಲಾಗುತ್ತದೆ.
ಗಮನಿಸಿ:
ನೀವು ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಒದಗಿಸದಿದ್ದರೆ, ಅದು ನಿಷ್ಕ್ರಿಯವಾಗಿದ್ದರೆ (ಉದಾಹರಣೆಗೆ - ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲದಿದ್ದರೆ), ಅಥವಾ ಅಮಾನ್ಯವಾಗಿದ್ದರೆ, ಟಿಡಿಎಸ್ ಅನ್ನು ಶೇ.20 ರಿಂದ ಶೇ.30 ರ ಹೆಚ್ಚಿನ ದರದಲ್ಲಿ ವಿಧಿಸಲಾಗುತ್ತದೆ.
ಟಿಡಿಎಸ್ ಅನ್ನು ಕ್ಲೈಮ್ ಮಾಡುವುದು(ಮರುಪಾವತಿ ಪಡೆಯುವುದು) ಹೇಗೆ?
ನಿಮ್ಮ ಒಟ್ಟು ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ನಿಮ್ಮ ನಿಯಮಿತ ಗಳಿಕೆಗಳು ಅಥವಾ ಐಪಿ ಪಾವತಿಗಳಿಂದ ಕಡಿತಗೊಳಿಸಿದ ಶೇ.10 ರಷ್ಟು ಟಿಡಿಎಸ್ ಅನ್ನು ನೀವು ಕ್ಲೈಮ್ ಮಾಡಬಹುದು.
ಕ್ಲೈಮ್ ಮಾಡಲು, ನೀವು ಆ ಆರ್ಥಿಕ ವರ್ಷ ಮುಗಿದ ನಂತರ, ಸಾಮಾನ್ಯವಾಗಿ ಏಪ್ರಿಲ್ ಮತ್ತು ಜುಲೈ ನಡುವೆ, ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಬೇಕು.
ನಿಮ್ಮ ITR ಅನ್ನು ಸಲ್ಲಿಸುವಾಗ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಪ್ರಮಾಣೀಕೃತ ತೆರಿಗೆ ವೃತ್ತಿಪರರ ಸಹಾಯವನ್ನು ತೆಗೆದುಕೊಳ್ಳಲು ನಾವು ಸಲಹೆ ನೀಡುತ್ತೇವೆ.
ನಿಮ್ಮ ITR ಅನ್ನು ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆಗೊಳಿಸಿದ ನಂತರ, ಕಡಿತಗೊಳಿಸಿದ ಟಿಡಿಎಸ್ ಮೊತ್ತವನ್ನು ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಗೆ ನೇರವಾಗಿ ಮರುಪಾವತಿ ಮಾಡಲಾಗುತ್ತದೆ.
ನೀವು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ನಿಮ್ಮ ಫಾರ್ಮ್ 26AS ಅಥವಾ AIS ಅನ್ನು ಪರಿಶೀಲಿಸುವ ಮೂಲಕ ಕಡಿತಗೊಳಿಸಿದ ಟಿಡಿಎಸ್ ಅನ್ನು ಟ್ರ್ಯಾಕ್ ಮಾಡಬಹುದು. (ಆದಾಯ ತೆರಿಗೆ ವೆಬ್‌ಸೈಟ್ ಲಿಂಕ್ -https://incometaxindia.gov.in/Pages/default.aspx)
ದಯವಿಟ್ಟು ಗಮನಿಸಿ: ಸ್ಪರ್ಧೆಯ ಬಹುಮಾನಗಳಿಂದ ಕಡಿತಗೊಳಿಸಿದ ಶೇ. 30 ರಷ್ಟು ಟಿಡಿಎಸ್ ಅನ್ನು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 115BB ಪ್ರಕಾರ ನಂತರದಲ್ಲಿ ಕ್ಲೈಮ್ ಮಾಡಲು ಸಾಧ್ಯವಿಲ್ಲ.
ಪ್ರಮುಖ ಅಂಶಗಳು:
ಟಿಡಿಎಸ್ ಆದಾಯ ತೆರಿಗೆ ಕಾಯಿದೆಯಡಿಯಲ್ಲಿ ಕಡ್ಡಾಯವಾದ ಕಾನೂನು ಅವಶ್ಯಕತೆಯಾಗಿದ್ದು, ನಿಮ್ಮ ಒಟ್ಟು ಗಳಿಕೆ ಅಥವಾ ಬಹುಮಾನದ ಮೊತ್ತವನ್ನು ಆಧರಿಸಿ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ.
ನೀವು ಪ್ರತಿಲಿಪಿಯಲ್ಲಿ ಅನೇಕ ಭಾಷೆಗಳಲ್ಲಿ ಬರೆದರೂ, ನಿಮ್ಮ ಎಲ್ಲಾ ಖಾತೆಗಳಾದ್ಯಂತ ಒಂದೇ ಪ್ಯಾನ್ ಅನ್ನು ಲಿಂಕ್ ಮಾಡಿದ್ದರೆ, ಎಲ್ಲಾ ಭಾಷೆಗಳಾದ್ಯಂತ ನಿಮ್ಮ ಒಟ್ಟು ಆದಾಯ ಅಥವಾ ಬಹುಮಾನಗಳನ್ನು ಒಂದೇ ಪ್ಯಾನ್ ಅಡಿಯಲ್ಲಿ ಒಟ್ಟಿಗೆ ಎಣಿಕೆ ಮಾಡಲಾಗುತ್ತದೆ.
ಉದಾಹರಣೆಗೆ, ನಿಮ್ಮ ಒಟ್ಟು ಬಹುಮಾನ ವಿವಿಧ ಭಾಷೆಗಳಾದ್ಯಂತ ಒಂದು ಆರ್ಥಿಕ ವರ್ಷದಲ್ಲಿ ₹10,000/- ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಶೇ.30 ರಷ್ಟು ಟಿಡಿಎಸ್ ಕಡಿತಗೊಳ್ಳುತ್ತದೆ.
ಸ್ಪರ್ಧೆಯ ಬಹುಮಾನಗಳ ಮೇಲಿನ ಟಿಡಿಎಸ್ ಅನ್ನು ಪ್ರತಿ ಸ್ಪರ್ಧೆ ಮೇಲೆ ಮಾತ್ರವಲ್ಲದೆ, ಒಂದು ಆರ್ಥಿಕ ವರ್ಷದಲ್ಲಿನ ಒಟ್ಟು ಬಹುಮಾನಗಳ ಮೇಲೆ ಲೆಕ್ಕ ಹಾಕಲಾಗುತ್ತದೆ. ಒಮ್ಮೆ ನಿಮ್ಮ ಒಟ್ಟು ಬಹುಮಾನದ ಮೊತ್ತ ₹10,000/- ದಾಟಿದರೆ, ಒಟ್ಟು ಅರ್ಹ ಮೊತ್ತಕ್ಕೆ ಶೇ. 30 ರಷ್ಟು ಟಿಡಿಎಸ್ ಅನ್ವಯವಾಗುತ್ತದೆ.
ಒಂದು ಆರ್ಥಿಕ ವರ್ಷದಲ್ಲಿ ಈಗಾಗಲೇ ಟಿಡಿಎಸ್ ಕಡಿತಗೊಂಡಿದ್ದರೆ ಮತ್ತು ನೀವು ನಂತರ ಮತ್ತೆ ನಗದು ಬಹುಮಾನ ಗಳಿಸಿದರೆ, ಆ ಆರ್ಥಿಕ ವರ್ಷದ ನಿಮ್ಮ ಒಟ್ಟು ಬಹುಮಾನದ ಮೊತ್ತದ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ ಮತ್ತು ತೆರಿಗೆ ಕಾಯಿದೆಯ ಪ್ರಕಾರ ಹೆಚ್ಚುವರಿ ಕಡಿತಗಳನ್ನು(ಸೆಸ್) ಅನ್ವಯಿಸಲಾಗುತ್ತದೆ.
ನಿಮ್ಮ ಒಟ್ಟು ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ನಿಮ್ಮ ನಿಯಮಿತ ಗಳಿಕೆಗಳು ಅಥವಾ ಐಪಿ ಪಾವತಿಗಳ ಮೇಲಿನ ಶೇ. 10 ರಷ್ಟು ಟಿಡಿಎಸ್ ಅನ್ನು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಮೂಲಕ ನೀವು ಕ್ಲೈಮ್ ಮಾಡಬಹುದು.
ಸ್ಪರ್ಧೆಯ ಬಹುಮಾನಗಳ ಮೇಲಿನ ಶೇ. 30 ರಷ್ಟು ಟಿಡಿಎಸ್ ಅಂತಿಮವಾಗಿರುತ್ತದೆ ಮತ್ತು ಅದನ್ನು ನಂತರದಲ್ಲಿ ಮರುಪಾವತಿ ಪಡೆಯಲು ಸಾಧ್ಯವಿಲ್ಲ.
ನೀವು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಿರುವ ನಿಮ್ಮ ಫಾರ್ಮ್ 26AS ಅಥವಾ AIS ನಲ್ಲಿ ಕಡಿತಗೊಳಿಸಿದ ಟಿಡಿಎಸ್ ವಿವರಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು.
ಲೇಖಕರ ಎಲ್ಲಾ ಪಾವತಿಗಳಿಗಾಗಿ ಈ ನಿಯಮಗಳನ್ನು ಅನುಸರಿಸುವುದು ಆದಾಯ ತೆರಿಗೆ ಕಾಯಿದೆಯ ಪ್ರಕಾರ ಪ್ರತಿಲಿಪಿಗೆ ಕಡ್ಡಾಯವಾಗಿದೆ ಮತ್ತು ಟಿಡಿಎಸ್ ಕಡಿತಗಳನ್ನು ಹಿಂತಿರುಗಿಸಲು ಅಥವಾ ಬಿಟ್ಟುಬಿಡಲು ಸಾಧ್ಯವಿಲ್ಲ.
ನಿಮಗೆ ಯಾವುದೇ ತ್ರೈಮಾಸಿಕದ ಫಾರ್ಮ್ 16A ಅಗತ್ಯವಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಮಾಡುವ ಮೂಲಕ ವಿನಂತಿಸಬಹುದು.
ಈ ವಿವರಣೆಯು ಪ್ರತಿಲಿಪಿಯಲ್ಲಿ ಟಿಡಿಎಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ.
ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ನಿಮ್ಮ ಪಾವತಿ ವಿವರಗಳ ಕುರಿತು ಸಹಾಯ ಬೇಕಿದ್ದರೆ, ದಯವಿಟ್ಟು ಆ್ಯಪ್ ಮೂಲಕ ತಂಡವನ್ನು ಸಂಪರ್ಕಿಸಿ. ನಿಮಗೆ ಸಹಾಯ ಮಾಡಲು ನಾವು ಸದಾ ಸಿದ್ಧರಿರುತ್ತೇವೆ.
ಪ್ರತಿಲಿಪಿಕನ್ನಡ ಬಳಗ