ಆತ್ಮೀಯ ಸಾಹಿತ್ಯಾಭಿಮಾನಿಗಳಿಗೆ ನಮಸ್ಕಾರಗಳು,
10 ವರ್ಷಗಳ ಹಿಂದೆ ಅಂದರೆ 14 ಸೆಪ್ಟೆಂಬರ್, 2014 ರಂದು ಪ್ರತಿಲಿಪಿ ವೆಬ್ಸೈಟ್’ನ ಮೊದಲ ಸಾರ್ವಜನಿಕ ಬೀಟಾ ಆವೃತ್ತಿಯನ್ನು ಬಿಡುಗಡೆಗೊಳಿಸಿದೆವು.
ಆ ಸಮಯದಲ್ಲಿ ನಮ್ಮೊಂದಿಗಿದ್ದದ್ದು ನೂರಾರು ಪ್ರಶ್ನೆಗಳು ಮತ್ತು ಒಂದೇ ಒಂದು ಗುರಿ! ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ಯಾವುದೇ ಭಾಷೆಯ ತಡೆ ಇರುವುದಿಲ್ಲ. ನಮ್ಮ ಲೇಖಕ, ಲೇಖಕಿಯರು ತಮ್ಮ ಕಲ್ಪನೆ, ವಿಚಾರ ಮತ್ತು ಭಾವನೆಗಳನ್ನು ಅಕ್ಷರ ರೂಪದಲ್ಲಿ ದೇಶ, ಭಾಷೆಗಳ ಮಿತಿ ಇಲ್ಲದೇ ವಿಶ್ವಾದ್ಯಂತ ಹಂಚುವಂತಾಗಬೇಕು. ಪ್ರತಿಲಿಪಿ ಅದಕ್ಕೆ ವೇದಿಕೆಯಾಗಬೇಕು ಎಂಬ ಗುರಿ.
ಈ ಪಯಣ ಅಷ್ಟು ಸುಲಭವಾದದ್ದೇನೂ ಅಲ್ಲ ಎಂಬುದು ನಮಗೆ ತಿಳಿದಿತ್ತು. ಹಾಗೆಯೇ ನಮ್ಮ ಈ ಮಹತ್ವಾಕಾಂಕ್ಷೆಯನ್ನು ಸಫಲಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಜಯ ಗಳಿಸಿದರೆ ಅದು ಅದ್ಭುತ ಯಶಸ್ಸಾಗಿ ಪರಿಣಮಿಸುವುದರಲ್ಲಿ ಸಂಶಯವಿರಲಿಲ್ಲ.
ಈ ಪ್ರಯಾಣ ಇಷ್ಟು ಕಠಿಣ; ಜೊತೆಗೆ ಇಷ್ಟೊಂದು ಜನರ ಪ್ರೀತಿ, ಅಭಿಮಾನ ಗಳಿಸಿಕೊಡುತ್ತದೆಂದು ನಾವು ಭಾವಿಸಿರಲಿಲ್ಲ!
ನಿಮ್ಮ ಕತೆಗಳು ಒಂದು ತಿಂಗಳಿನಲ್ಲಿ ನೂರಾರು ಬಾರಿ ಓದಲ್ಪಡುತ್ತಿದ್ದುದರಿಂದ ಹಿಡಿದು; ನಮ್ಮ ಈ ಪ್ರಯಾಣದಲ್ಲಿ ನೂರಾರು ಜನರು ನಮ್ಮೊಂದಿಗೆ ಸೇರುತ್ತಿರುವುದನ್ನು ಸಂಭ್ರಮಿಸಿದ ಕ್ಷಣಗಳು ಅವಿಸ್ಮರಣೀಯ. ಈಗ ನಾವು ಒಂದು ಮಿಲಿಯನ್’ಗೂ ಅಧಿಕ ಬರಹಗಾರರ ಕುಟುಂಬವಾಗಿದ್ದು, ನಮ್ಮಲ್ಲಿ ಪ್ರಕಟಗೊಳ್ಳುತ್ತಿರುವ ಬರಹಗಳನ್ನು ಪ್ರತಿವಾರ ನೂರಾರು ಮಿಲಿಯನ್ ಜನರು ಓದುತ್ತಿರುವುದು ಹೆಮ್ಮೆಯೆನಿಸುತ್ತಿದೆ!
3 ವರ್ಷಗಳ ಹಿಂದೆ ನಾವು ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸುವ ತಮ್ಮ ಬರಹಗಳಿಂದಲೇ ನಮ್ಮ ಲೇಖಕ/ಲೇಖಕಿಯರು ಆದಾಯ ಗಳಿಕೆಯ ಸೌಲಭ್ಯವನ್ನು ಪರಿಚಯಿಸಿದೆವು. ಇದಕ್ಕೆ ನಿಮ್ಮ ಬೆಂಬಲ ನಿಜಕ್ಕೂ ಅವಿಸ್ಮರಣೀಯವಾದುದು. ನೀವೆಲ್ಲರೂ ಪ್ರತಿಲಿಪಿಯಲ್ಲಿ ಬರೆದು ಪ್ರಕಟಿಸಿ ಓದುಗರ ಮನಗೆಲ್ಲುತ್ತಿದ್ದೀರಿ. ಏಕೆಂದರೆ ನಿಮ್ಮ ಕತೆಯನ್ನು ಅಷ್ಟೊಂದು ಉತ್ಸಾಹದಿಂದ, ಕೌತುಕದಿಂದ ಓದುವ ಓದುಗರ, ಅಭಿಮಾನಿಗಳ ಬಳಗ ನಿಮ್ಮ ಹಿಂದಿದೆ. ಹಿಂದಿನ ತಿಂಗಳು ಅಂತಹ ಅಭಿಮಾನಿ ಓದುಗರು 1.5 ಕೋಟಿಗೂ ಅಧಿಕ ರಾಯಧನವನ್ನು ತಮ್ಮ ನೆಚ್ಚಿನ ಬರಹಗಾರರು ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿರುವುದನ್ನು ನೋಡಿದಾಗ; ಪ್ರತಿಲಿಪಿಯ ಲೇಖಕ/ಲೇಖಕಿಯರು ಮತ್ತು ಅವರ ಕೃತಿಗಳಿಗೆ ಮಾನ್ಯತೆ ಸಿಗಬಹುದೇ ಎಂದು ಹೊರಗಿನವರು ಅನುಮಾನಿಸುತ್ತಿದ್ದದ್ದು ನಿನ್ನೆ ಮೊನ್ನೆ ನಡೆದಂತೆ ತೋರುತ್ತದೆ. ನಾವೀಗ ಐದು ಟಿ.ವಿ. ಶೋಗಳನ್ನು ಹೊಂದಿದ್ದೇವೆ; ಪ್ರತಿಲಿಪಿಯ ಕಥೆಗಳ ಆಧಾರಿತ ವೆಬ್ ಸಿರೀಸ್’ಗಳನ್ನು ರಚಿಸಿದ್ದೇವೆ. ಮತ್ತುಈ ಪಯಣ ಎಲ್ಲಿಯೂ ವಿರಮಿಸದೇ ಸಾಗಲಿ ಎನ್ನುವ ಹಂಬಲವನ್ನು ಹೊತ್ತು ನಡೆಯುತ್ತಿದ್ದೇವೆ.
ಇದು ನೇರ ಮತ್ತು ಸುಲಲಿತ ಪ್ರಯಾಣವಾಗಿರಲಿಲ್ಲ. ಹಲವು ಬಾರಿ ದಿಕ್ಕುಗಾಣದ ಸ್ಥಿತಿಗಳೂ ಎದುರಾಗಿವೆ. ಇನ್ನಷ್ಟು ಬಾರಿ ಎದುರಾದ ಅಡೆತಡೆಗಳಿಂದ ಮುಗ್ಗರಿಸಿದ್ದೂ ಇದೆ. ಆದರೆ ಸತತ ಪ್ರಯತ್ನ ಮತ್ತು ಪರಿಶ್ರಮದ ಫಲ ಸಿಹಿಯಾಗಿರುತ್ತದೆ ಎಂಬುದರ ಅನುಭವಗಳು ಆಗಿವೆ; ಆಗುತ್ತಿವೆ.
ಆ ಸಿಹಿಯಾದ ಫಲ ಉಣಿಸಿದ್ದು ನೀವು! ನಿಮ್ಮ ವಿಶ್ವಾಸ, ಪ್ರೀತಿ, ಅಭಿಮಾನಗಳು ಎಲ್ಲ ಹಂತಗಳನ್ನು ದಾಟಿ ಮುಂದುವರೆಯಲು ಪುಷ್ಟಿ ನೀಡಿದೆ, ನೀಡುತ್ತಲಿದೆ.
ಕ್ರಮಿಸುವ ದಾರಿ ಇನ್ನೂ ಬಹಳ ದೂರವಿದೆ. ನಮ್ಮ ಸಾವಿರಾರು ಬರಹಗಾರರು ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಳ್ಳುವ ಮೂಲಕ ಪ್ರತಿ ತಿಂಗಳೂ ಖಚಿತ ಆದಾಯ ಗಳಿಸಿ, ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದನ್ನು ಕಾಣಲು ನಾವು ಬಯಸುತ್ತೇವೆ. ನಮ್ಮಲ್ಲಿ ಬರೆದು ಪ್ರಕಟಿಸಲು ಪ್ರಾರಂಭಿಸಿದ ಸಾವಿರಾರು ಉದಯೋನ್ಮುಖ ಲೇಖಕ/ಲೇಖಕಿಯರು ಪ್ರತಿಲಿಪಿಯ ಹೊರಗೂ ಸಾಕಷ್ಟು ಮನ್ನಣೆ, ಯಶಸ್ಸು ಮತ್ತು ಜನಪ್ರಿಯತೆಯನ್ನು ಈಗಾಗಲೇ ಗಳಿಸುತ್ತಿದ್ದು, ಇದಿನ್ನೂ ಅಧಿಕಗೊಳ್ಳುವ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ. ಅವರ ಯಶಸ್ಸನ್ನು ಸಂಭ್ರಮಿಸಲು ಕಾಯುತ್ತಿದ್ದೇವೆ.
ನಮ್ಮ ಮುಂದಿನ ಪ್ರಯಾಣದಲ್ಲಿ ನಮ್ಮ ಜೊತೆ ನಿಮ್ಮ ಹೆಜ್ಜೆಗಳೂ ಇರಲಿ ಎಂದು ಬಯಸುತ್ತೇವೆ. ನಿಮ್ಮ ಪ್ರೋತ್ಸಾಹ, ವಿಶ್ವಾಸ, ಅಭಿಮಾನಗಳೇ ಮುಂದಿನ ನಮ್ಮ ಮೈಲುಗಲ್ಲುಗಳಿಗೆ ಅಡಿಪಾಯ.
ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ…