"ಜೀವನದಲ್ಲಿ ಎಲ್ಲಾ ಇದ್ದರೂ ಏನಾದರೂ ಒಂದು ಕೊರಗು, ನೋವು ಇರೋದು ಸಹಜ ಅಲ್ವಾ..? ನನಗೂ ಹಾಗೆ, ರಾಜ್ಯ ಬಿಟ್ಟು ಈ ಮಹಾರಾಷ್ಟ್ರಕ್ಕೆ ಕಾಲಿಟ್ಟಾಗ ನಾನು ಕಳೆದುಕೊಂಡಿದ್ದು ನನ್ನ ಪ್ರೀತಿಯ ಭಾಷೆ ಕನ್ನಡವನ್ನು. ಕೇಳಲು ಇಂಪು, ಮನಸ್ಸಿಗೆ ಮುದ ನೀಡುವ ಭಾಷೆ ನನ್ನಿಂದ ನಿಧಾನಕ್ಕೆ ಮರೆಯಾಗುತ್ತಿದ್ದಂತೆ ಮನಸ್ಸಲ್ಲಿ ಏನೋ ಕಳೆದುಕೊಂಡ ಭಾವ. ಆಗ ನನಗೆ ಪರಿಚಯವಾಗಿದ್ದೇ ನನ್ನ ಪ್ರತಿಲಿಪಿ. ನನ್ನೊಳಗಿನ ನೋವು ಮರೆಸಿ, ಮರೆತು ಹೋದ ಅಕ್ಷರಗಳಿಗೆ ಜೀವ ತುಂಬಿ, ನನ್ನ ಬದುಕಿಗೆ ಒಂದು ಹೊಸ ಅರ್ಥವನ್ನೇ ಕೊಟ್ಟಿತು. ಎಲ್ಲರ ಕಥೆ ಓದುತ್ತಾ, ನಾನು ಬರೆಯಲು ಶುರುಮಾಡಿ ಪ್ರತಿಲಿಪಿಯೊಂದಿಗೆ ನನ್ನ ಬದುಕು ಬೆರೆತು ಹೋಯಿತು. ಅದರಲ್ಲಿ ಬರುವ ಸುಂದರ ಕಾಮೆಂಟ್, ಕೆಲವರು ಮೆಸೇಜ್ ಮಾಡಿ ಕೂಡಾ ತುಂಬಾ ಚೆನ್ನಾಗಿ ಬರೆಯುತ್ತಿರಿ ಎಂದಾಗ ಅದೇನೋ ಸಾಧಿಸಿದಂತಹ ಹೆಮ್ಮೆ. ಗೃಹಿಣಿಯಾಗಿ ಮನೆಯಲ್ಲೇ ಇರುವ ನನಗೆ ಇತ್ತೀಚಿಗೆ ಬರುತ್ತಿರುವ ಒಂದಿಷ್ಟು ಹಣ ನೋಡಿ ಮನಸಲ್ಲಿ ಹೇಳಲಾರದಷ್ಟು ಖುಷಿ. ನನ್ನ ಪ್ರತಿಲಿಪಿ ನನ್ನ ಹೆಮ್ಮೆ. ನನ್ನ ಬದುಕಿನ ಕೊನೆಯವರೆಗೂ ನನ್ನ ಜೊತೆಯಾಗಿರೋ ನನ್ನ ಬಂಧು"
- ರೂಪ ರೈ
"ಇದುವರೆಗೂ ಬರೀ ತೀರ್ಥ ಶಿವು ಎಂದು ನಾಲ್ಕಾರು ಜನರಿಗೆ ಪರಿಚಯವಿದ್ದ, ನನ್ನವರಿಂದಲೇ ತಿರಸ್ಕೃತಳಾಗಿದ್ದ ನಾನು ಇಂದು ನೂರಾರು, ಸಾವಿರಾರು ಜನರಿಗೆ ಪರಿಚಿತಳು. ಕೆಲವರಿಗೆ ಗೆಳತಿ, ಅಕ್ಕ, ತಂಗಿ, ಮಗಳು, ಅಮ್ಮ, ಸ್ಫೂರ್ತಿ ಕೂಡ ಆಗಿದ್ದೇನೆ. ನನಗೊಂದು ದೊಡ್ಡ ಕುಟುಂಬ ದೊರೆತಿದೆ ಅಂದ್ರೆ ಅದಕ್ಕೆ ಕಾರಣವೇ ಪ್ರತಿಲಿಪಿ. ಯಾರೆದಿರೂ ಕೈ ಚಾಚದೇ ಸ್ವಂತ ದುಡಿಮೆಯಿಂದಲೇ ಪುಟ್ಟ ಮನೆಯೊಂದನ್ನು ಕಟ್ಟಲು ನೆರವಾಗಿದ್ದು, ನನ್ನನ್ನು ಆರ್ಥಿಕವಾಗಿ ಸದೃಢಳನ್ನಾಗಿಸಿದ್ದು ಇದೇ ಪ್ರತಿಲಿಪಿ. ಇಷ್ಟು ಮಾತ್ರವೇ ಅಲ್ಲ ಬರಿದಾಗಿದ್ದ ನನ್ನ ಮಡಿಲನ್ನು ತುಂಬಿದ್ದು ಕೂಡ ಪ್ರತಿಲಿಪಿಯೇ. ಲಿಪಿಯಲ್ಲಿ ಓದುಗರೊಬ್ಬರ ಮೂಲಕ ಒಂದು ಮಗುವನ್ನು ದತ್ತು ಪಡೆದ ನಾನಿಂದು ಪರಮ ಸುಖಿ ಎನ್ನುವುದಕ್ಕೂ ಅಡ್ಡಿಯಿಲ್ಲ. ಒಟ್ಟಿನಲ್ಲಿ ಪ್ರತಿಲಿಪಿ ಎನ್ನುವುದು ನನ್ನ ಪಾಲಿಗೆ ಕೇವಲ ಬರೆಯುವ - ಓದುವ ಒಂದು ವೇದಿಕೆ ಮಾತ್ರವೇ ಅಲ್ಲ. ನನ್ನ ಬದುಕನ್ನೇ ಬದಲಿಸಿದ ಅಧ್ಭುತ. ನಾನೆಂದೂ ಪ್ರತಿಲಿಪಿಗೆ ಚಿರಋಣಿಯೇ ಸರಿ. ಇದರಲ್ಲಿ ಅತಿಶಯೋಕ್ತಿ ಏನೂ ಇಲ್ಲ…"
- ತೀರ್ಥ ಶಿವು
“ಪ್ರತಿಲಿಪಿಯಲ್ಲಿ 2017ರ ಕೊನೆಯ ದಿನ ನನ್ನ ಥ್ರಿಲ್ಲರ್ ಕಾದಂಬರಿ ಛದ್ಮವೇಷದ ಮೊದಲ ಕಂತು ಪ್ರಕಟವಾಯಿತು. ಅಂದೇ ಆರಂಭ. ಅಂದಿನಿಂದ ಒಂದು ದಿನವೂ ಎಡೆಬಿಡದೇ ಪ್ರತಿ ದಿನ ಕನಿಷ್ಠ ಒಂದೊಂದು ಬರಹ. ಆ ರೀತಿ ನನ್ನ ಎಲ್ಲ ಕಾದಂಬರಿಗಳೂ, ಎಲ್ಲ ಕಥೆಗಳೂ, ಅನೇಕ ಲೇಖನಗಳೂ ಪ್ರಕಟವಾಗಿವೆ. ನನಗೆ ಆಗುತ್ತಿದ್ದ ಸಂತೋಷವೇನೆಂದರೆ ನನ್ನ ಬರಹದ ಒಂದು ಕಂತು ಪ್ರಕಟವಾದೊಡನೆ ಓದುಗರಿಂದ ಬರುತ್ತಿರುವ ಪ್ರತಿಕ್ರಿಯೆಗಳು. ಅವರ ಆನಂದ, ದುಃಖ, ಕೋಪ ಎಲ್ಲವನ್ನೂ ಹೊರಹಾಕುತ್ತಾರೆ. ನನ್ನ ಅನೇಕ ಕಾದಂಬರಿ ನಾಯಕ ನಾಯಕಿಯರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟವರಿದ್ದಾರೆ. ಇಂದು ನನಗೆ 32 ಲಕ್ಷಕ್ಕೂ ಹೆಚ್ಚು ಓದುಗರಿದ್ದಾರೆ. ಧನ್ಯವಾದಗಳು ಶ್ರೀ ರಂಜಿತ್ ಸಿಂಹ ಮತ್ತು ಶ್ರೀ ಅಕ್ಷಯ್ ಬಾಳೆಗೆರೆ"
- ಯತಿರಾಜ್ ವೀರಾಂಬುಧಿ
“ಸಾಮಾನ್ಯ ಓದುಗಳಾಗಿದ್ದ ನಾನು ಇಂದು ಒಬ್ಬ ಲೇಖಕಿಯಾಗಿ ಗುರುತಿಸಿಕೊಂಡು ನನ್ನದೇ ಆದ ಅಭಿಮಾನಿಗಳನ್ನು ಅವರ ಪ್ರೀತಿ ವಿಶ್ವಾಸವನ್ನು ಹೊಂದಿದ್ದೇನೆ ಎಂದರೆ ಅದು ಸಾಧ್ಯವಾಗಿದ್ದು ಪ್ರತಿಲಿಪಿಯಿಂದ.
ಈಗ ಪ್ರತಿಲಿಪಿ ನನ್ನ ಜೀವನದ ಅತಿ ಬಹು ಮುಖ್ಯ ಭಾಗವಾಗಿದೆ. ಹಾಗೆ ಆರ್ಥಿಕವಾಗಿಯೂ ಸಬಲಳನ್ನಾಗಿ ಮಾಡಿದೆ.
ಇಂಥ ಒಂದು ಪ್ರತಿಲಿಪಿ ವೇದಿಕೆಗೆ ಹತ್ತು ವರ್ಷಗಳು ತುಂಬಿದೆ ಹೀಗೆ ನಿರಂತರವಾಗಿ ಸಾಗಲಿ ಎಂದು ಬಯಸುತ್ತೇನೆ.”
- ಶ್ರೀ ಮಂಗಳ ಶೆಟ್ಟಿ
“ಪ್ರತಿಲಿಪಿ ಬರೀ ಬರವಣಿಗೆಗಳನ್ನು ಸ್ವಯಂ ಪ್ರಕಾಶನಗೊಳಿಸುವ ವೇದಿಕೆ ಮಾತ್ರ ಅಲ್ಲ ನಮ್ಮ ಜ್ಞಾನಕ್ಕೆ ಒರೆ ಹಚ್ಚಿ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಅನೇಕಾನೇಕ ಪದಗಳನ್ನು ಹೊರ ತಂದು ಅರ್ಥ ತಿಳಿಸಿ, ನಮ್ಮ ಜ್ಞಾನಕ್ಕೆ ಸಾಣೆ ಹಿಡಿದ ಒಂದು ವೇದಿಕೆ. ಈ ಪ್ರತಿಲಿಪಿಯಿಂದಾಗಿ ಎಲ್ಲೋ ಹಳೆಯ ಪುಟಗಳಲ್ಲಿ ಕೊಳೆತು ಹೋಗಿದ್ದ ನನ್ನ ಬರವಣಿಗೆ ಮತ್ತೆ ಚಿಗುರೊಡೆದು ನಳನಳಿಸಿ ಸಾವಿರಾರು ಓದುಗರ ಮನದoಗಳದಲ್ಲಿ ಪುಷ್ಪವಾಗಿದ್ದು ನನ್ನ ಸುಕೃತ ಫಲ.
ನನ್ನ ಒಂದೊಂದು ಬರಹದಲ್ಲಿ ಬರುವ ಒಂದೊಂದು ವಿಷಯದ ಬಗ್ಗೆ ಕೃಷಿ ಮಾಡಿದಾಗ ಕಲೆ ಹಾಕಿದ ಅದೆಷ್ಟೋ ಮಾಹಿತಿಗಳೆoಬ ದವಸ ಧಾನ್ಯಗಳು ನನ್ನ ಜ್ಞಾನದ ಕಣಜ ತುಂಬಲು ಸಹಾಯವಾಗಿದೆ. ಹಲವಾರು ಬರಹಗಾರರಿಗೆ ಅಥವಾ ಓದುಗರಿಗೆ ತಾನು ನಕ್ಕಾಗ ನಗುವ ಅತ್ತಾಗ ಅಳುವ ಒಂದು ಸಂಗಾತಿ ಈ ಪ್ರತಿಲಿಪಿ. ಈ ಪ್ರತಿಲಿಪಿ ಎನ್ನುವ ಸಂಗಾತಿಗೆ ಹತ್ತನೇ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು ”
- ಕೃಷ್ಣಪ್ರಿಯೆ
“ಪ್ರತಿಲಿಪಿ ಪ್ರತಿದಿನದ ನನ್ನ ಜೀವನದ ಒಂದು ಭಾಗವೇ ಆಗಿದೆ. ಒಂದು ದಿನ ಪ್ರತಿಲಿಪಿ ಕಡೆ ಹೋಗಿಲ್ಲ ಅಂದ್ರೆ ಏನನ್ನೋ ಕಳ್ಕೊಂಡ ಅನುಭವ. 2019ರಲ್ಲಿ ಪ್ರತಿಲಿಪಿ ನಂಗೆ ಪರಿಚಯವಾಗಿದ್ದು. ಪಕ್ಕದ ಮಹಾರಾಷ್ಟ್ರದ ಪುಣೆಗೆ ಆಗತಾನೇ ಬಂದ ದಿನಗಳು. ಕನ್ನಡ, ತಕ್ಕಮಟ್ಟಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ ನನಗೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಮಾತನಾಡೋಕೆ ಕೂಡಾ ಯಾರೂ ಸಿಗದೇ ಸ್ವಚ್ಚಂದವಾಗಿ ಹಾರಾಡ್ಕೊಂಡು ಇದ್ದ ಹಕ್ಕಿಯನ್ನ ತಂದು ಪಂಜರದಲ್ಲಿ ಬಂಧಿಸಿದ ಹಾಗೆ ಆಗಿತ್ತು ನನ್ನ ಪರಿಸ್ಥಿತಿ. ಆಗ ಪರಿಚಯವಾದ ಆಪತ್ಬಾಂಧವನೇ ನನ್ನ ಪ್ರೀತಿಯ ಪ್ರತಿಲಿಪಿ.
ಭಾಷೆ ಗೊತ್ತಿಲ್ದೆ ಇದ್ದಾಗ ಈ ಮರಾಠಿ ಜನಗಳ ನಡುವೆ ನನ್ನ ಭಾಷೆಯ ಬಗ್ಗೆ ಇನ್ನಷ್ಟು ಹೆಮ್ಮೆ ಎನಿಸಿದ್ದು ಪ್ರತಿಲಿಪಿಯಿಂದ ಮಾತ್ರ. ಒಂಟಿಯಾಗಿರುವೆ ಅನ್ನಿಸಿದಾಗ ಸ್ನೇಹಿತೆಯರು ಸಿಕ್ಕಿದ್ರು. ಒಂಟಿತನ ಕಳೆಯೋಕೆ ಒಂದು ಮಾರ್ಗ ಮಾಡಿಕೊಟ್ಟಿದ್ದು ಪ್ರತಿಲಿಪಿ. ನನ್ನ ಕೋಪ, ನೋವು ದುಃಖ ಖುಷಿಯ ಎಲ್ಲಾ ಕ್ಷಣಕ್ಕೂ ನಾನು ಪ್ರತಿಲಿಪಿಯನ್ನೇ ಆಶ್ರಯಿಸೋದು. ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕಥೆ ಬರೆದಾಗ ಓದುಗರು ಕಾಮೆಂಟ್ ಮಾಡಿದಾಗ ಅದೂ ನನಗೆ ಸಮಾಧಾನ ಮಾಡಿದ ಹಾಗೆ ಇರತ್ತೆ. ಓದುಗರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಕೆ ಸಹಾಯ ಆಗಿದೆ.
ಸೂಪರ್ ಸಾಹಿತಿ ಆರರ ಆವೃತ್ತಿಗೆ ಬರೆದ ಕಥೆ ಓದುಗರ ಆಯ್ಕೆಯ ವಿಜೇತ ಕೃತಿಯಲ್ಲಿ ಕಾಣಿಸಿಕೊಂಡಾಗ ಆದ ಖುಷಿ ಪ್ರತೀ ದಿನ ಹೊಸತನದ ಅನುಭವ ನೀಡತ್ತೆ. ಇನ್ನೂ ಪ್ರತಿಲಿಪಿಯ ಆದಾಯ ಗಳಿಕೆಯ ವಿಚಾರಕ್ಕೆ ಬಂದ್ರೆ, ಸಣ್ಣ ಪುಟ್ಟ ತಿಂಡಿ, ಅಗತ್ಯ ವಸ್ತುಗಳಿಂದ ಹಿಡಿದು ಮೊಬೈಲ್ ರೀಚಾರ್ಜ್'ಗೆ ಕೂಡಾ ಪತಿಯ ಬಳಿ ಕೇಳುತ್ತಿದ್ದವಳಿಗೆ ಈಗ ನನ್ನ ಸಣ್ಣ ಪುಟ್ಟ ಖರ್ಚುಗಳಿಗೆ ಪ್ರತಿ ಲಿಪಿಯಿಂದ ಬರುವ ಆದಾಯ ಸಾಕಷ್ಟು ಸಹಾಯಕಾರಿ ಆಗಿದೆ. ಹೇಳ್ತಾ ಹೋದ್ರೆ ಇನ್ನೂ ಇದೆ ಆದ್ರೆ ಅಷ್ಟನ್ನೂ ಇಲ್ಲಿ ಹೇಳೋಕೆ ಆಗಲ್ಲ. ಊಟ, ನಿದ್ದೆ ಬೇಕಾದ್ರೂ ಸುಲಭಕ್ಕೆ ಬಿಟ್ಟೇನು ಆದ್ರೆ ಪ್ರತಿಲಿಪಿ ಬಿಡೋದು ಹೆಚ್ಚೇ ಕಷ್ಟ. ಅಷ್ಟರ ಮಟ್ಟಿಗೆ ಪ್ರತಿಲಿಪಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ”
- ಚೈತ್ರ ಯೋಗೇಶ್
“ಪ್ರತೀ ಕಷ್ಟದಲ್ಲೂ ಸಹ ಅವಕಾಶವನ್ನು ಕಂಡುಕೊಳ್ಳಬಹುದು ಎಂಬಂತೆ ಈ ಪ್ರತಿಲಿಪಿ ಎನ್ನುವ ಪುಟ್ಟ ಪ್ರಪಂಚ ಇಂದು ಬೃಹದಾಕಾರವಾಗಿ ಆಕಾಶದೆತ್ತರಕ್ಕೆ ಬೆಳೆದು ನಮ್ಮಿಂದ ಏನೂ ಸಾಧ್ಯ ಇಲ್ಲ ಎನ್ನುತ್ತಾ ಮನೆಯಲ್ಲಿ ಇದ್ದ ಎಷ್ಟೋ ಗೃಹಿಣಿಯರಿಗೆ ಬದುಕಿನ ದಾರಿ ದೀಪ ಆಗಿದೆ.
ದುಡಿಮೆಯ ಶಕ್ತಿ ಆಗಿದೆ.
ನಾನೂ ಸಾಧಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗ ಆಗಿದೆ.
ಬೇಸರದಲ್ಲಿ ಇದ್ದಾಗ ನೋವು ಮರೆಯುವ ಮಾರ್ಗ, ಒಬ್ಬಂಟಿಯಾಗಿದ್ದಾಗ ನಾನಿರುವೆ ಜೊತೆಗೆ ಎನ್ನುವ ಧೈರ್ಯ ಕೊಟ್ಟಿದೆ.
ಎಷ್ಟೋ ಬರಹಗಾರರಿಗೆ ನಿನ್ನಮೇಲೆ ನಿನಗೆ ನಂಬಿಕೆ ಇದ್ರೇ ಎಲ್ಲವೂ ಸಾಧ್ಯ ಎನ್ನುವ ವಚನ ಪೂರೈಸಿದೆ ”
- ಕಾವ್ಯ ತನ್ಮಯಿ
“ಬರೆಯುವ ಹವ್ಯಾಸವಿದ್ದ ನನಗೆ ಪ್ರತಿಲಿಪಿ ಒಂದು ಉತ್ತಮ ವೇದಿಕೆಯಾಗಿ ಸಿಕ್ಕಿತ್ತು. ಸುಮಾರು ನಾಲ್ಕು ವರ್ಷಗಳಿಂದ ನಾನು ಪ್ರತಿಲಿಪಿ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಪ್ರತಿಲಿಪಿ ನನ್ನ ಬರಹ ಮತ್ತು ಭಾಷೆಯ ನೈಪುಣ್ಯತೆಯನ್ನು ಹೆಚ್ಚಿಸಿದೆ. ಹಾಗೆಯೇ ಪ್ರತಿಲಿಪಿ ಆರ್ಥಿಕವಾಗಿಯೂ ನನಗೆ ಬೆಂಬಲವನ್ನು ನೀಡುತ್ತಿದೆ. ಈ ವೇದಿಕೆ ಅನೇಕ ಉತ್ತಮ ಬರಹಗಾರರ ಪರಿಚಯ ಮಾಡಿಕೊಟ್ಟಿದೆ. ಅಲ್ಲದೆ ಓದುಗರ ಪ್ರೀತಿ ಕಾಳಜಿ ಅಭಿಮಾನ ದೊರಕಿದೆ. ಹಾಗೆಯೇ ಓದುಗರು ನನ್ನ ಬರಹವನ್ನು ಓದಿ, ಪ್ರತಿಕ್ರಿಯೆ, ಪ್ರೋತ್ಸಾಹ ನೀಡಿ ಇನ್ನಷ್ಟು ಮತ್ತಷ್ಟು ಬರಹವನ್ನು ಬರೆಯಲು ಪ್ರೇರಣೆ ನೀಡುತ್ತಿದ್ದಾರೆ. ಇದರಿಂದ ಪ್ರತಿಲಿಪಿ ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಈ ವೇದಿಕೆ ಇನ್ನಷ್ಟು ಉತ್ತಮ ಬರಹಗಾರರನ್ನು ಈ ಸಮಾಜಕ್ಕೆ ನೀಡಲಿ ಹಾಗೂ ಉತ್ತಮ ಸ್ಥಾನಕ್ಕೆ ಏರಲಿ...!”
- ವಸುಧಾ ಶಾಸ್ತ್ರಿ
“ಅನಿಸುತಿದೆ ಯಾಕೋ ಇಂದು, ನನ್ನ ಮನಸಿನ ಮಾತ ನಿಮ್ಮೊಡನೆ ಹೇಳಿಕೊಳ್ಳಬೇಕೆಂದು... ಹೌದು... ನನ್ನ 67 ನೇ ವಯಸ್ಸಿನಲ್ಲಿ ನನಗೆ ಉಂಟಾಗಿದ್ದು ‘ಪ್ರತಿಲಿಪಿ’ಯ ಒಡನಾಟ. ನನ್ನ ಬದುಕಿನ ಮೊದಲ 66 ವರುಷಗಳಲ್ಲಿ, ಅಜ್ಞನಾಗಿದ್ದ ನನ್ನ ಸಾಹಿತ್ಯ ರಚನೆ ‘ಸೊನ್ನೆ’ಯಾಗಿತ್ತು. ಈಗ ನನಗೆ 71 ವರುಷ. ಪ್ರತಿಲಿಪಿಯಲ್ಲಿ ಚಿಕ್ಕ ಪುಟ್ಟ ಲೇಖನ, ಕಥೆ, ಕವನಗಳನ್ನು ಬರೆಯಲು ಶುರುಮಾಡಿದ ಈ 4 ವರುಷಗಳಲ್ಲಿ, ನಾನು 7 ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಅವುಗಳಲ್ಲಿ ನನ್ನ ವೃತ್ತಿ ಅನುಭವ ಕಥನ, ಸಣ್ಣ ಕಥೆಗಳು ಹಾಗೂ ಕವನದ ಪುಸ್ತಕಗಳಿವೆ. ನನ್ನ ಸಂಗೀತ ಪಯಣದ ನೆನಪುಗಳ ಪುಸ್ತಕವು ಸದ್ಯದಲ್ಲಿಯೇ 8 ನೇ ಪುಸ್ತಕವಾಗಿ ಲೋಕಾರ್ಪಣೆಯಾಗುವುದರಲ್ಲಿದೆ.
ನಾಲ್ಕು ವರುಷಗಳ ಹಿಂದೆ, ನಾನು ಇಷ್ಟು ಪುಸ್ತಕಗಳನ್ನು ಪ್ರಕಟಿಸಬಹುದು ಎಂದು, ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ. ಅದು ಸಾಧ್ಯವಾದದ್ದಕ್ಕೆ ‘ಪ್ರತಿಲಿಪಿ’ಯೇ ಕಾರಣ. ಪ್ರತಿಲಿಪಿಯಲ್ಲಿ ನಾವು ಬರೆದಿದ್ದನ್ನು ಅತಿ ಸುಲಭವಾಗಿ ನಾವೇ ಪ್ರಕಟಿಸಬಹುದು. ನಮ್ಮ ಬರೆಹ ಪ್ರಕಟವಾದೊಡನೆ, ಆ ಬರೆಹಗಳನ್ನು ಓದಿ ಒಂದಿಷ್ಟು ಪ್ರತಿಕ್ರಿಯೆಗಳು ಬರುತ್ತವೆ. ಲೇಖಕನಿಗೆ, ಇದಕ್ಕಿಂತ ಉತ್ತಮವಾದ ಉತ್ತೇಜನ ಎಲ್ಲಿ ದೊರೆಯಲು ಸಾಧ್ಯ? ನಾವು ಬರೆದು ಆನಂದವನ್ನು ಅನುಭವಿಸಿ, ನಮ್ಮ ಬರೆಹವನ್ನು ಓದಿದವರಿಗೂ ಆನಂದವನ್ನು ಹಂಚುತ್ತೇವೆ! ಅದರ ಜೊತೆಯಲ್ಲಿ, ಪ್ರತಿಲಿಪಿಯಲ್ಲಿ ನಿತ್ಯವೂ, ಕಥೆ ರಚಿಸಲು ನಮಗೊಂದು ವಿಷಯವನ್ನು ನೀಡುತ್ತಾರೆ. ಆ ವಿಷಯವು ನಮಗೆ ಕಥೆ, ಕವನ, ವೈಚಾರಿಕ ಲೇಖನ, ಮುಂತಾದುವನ್ನು ರಚಿಸಲು, ಪ್ರೇರಣೆ ನೀಡುತ್ತದೆ! ಹಾಗಾಗಿಯೇ, ಇಲ್ಲಿಯವರೆಗೂ ನಾನು 418 ಸಣ್ಣ ಕಥೆಗಳನ್ನು ಹಾಗೂ 200 ಕ್ಕೂ ಹೆಚ್ಚು ಕವನಗಳನ್ನು, ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೇನೆ. ನಿಜಕ್ಕೂ ಇವೆಲ್ಲಾ ನನ್ನ ಸಾಧನೆಯಲ್ಲ. ಇವೆಲ್ಲಾ ನನಗೆ ಸಾಧ್ಯವಾದದ್ದು ನನ್ನ ನೆಚ್ಚಿನ ‘ಪ್ರತಿಲಿಪಿ’ಯಿಂದ, ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ! ಈ ಮೇಲಿನ ಕಾರಣಗಳಿಂದಾಗಿ, ಪ್ರತಿಲಿಪಿಗೆ ನಾನು ಸರ್ವದಾ ಕೃತಜ್ಞನಾಗಿದ್ದೇನೆ. ನನಗೆ ಸಾಹಿತ್ಯ ರಚಿಸುವ ನಿತ್ಯದ ಗೀಳು ಹಚ್ಚಿಸಿದ ‘ಪ್ರತಿಲಿಪಿ’ಗೆ, ನನ್ನ ಒಂದು ಪುಸ್ತಕವನ್ನು ಕೃತಜ್ಞತಾಪೂರ್ವಕವಾಗಿ ಸಮರ್ಪಿಸಿದ್ದೇನೆ.
‘ಪ್ರತಿಲಿಪಿ-ಕನ್ನಡ’ಕ್ಕೆ ಹತ್ತರ ಸಂಭ್ರಮ! ಹತ್ತು ವರುಷವೇನು, ನೂರು, ಸಾವಿರಗಳ ಸಂಭ್ರಮ, ಪ್ರತಿಲಿಪಿಯದ್ದಾಗಲಿ! ಎಂಥ ಅಜ್ಞನಿಗೂ ಬರೆಯಲು ಕಲಿಸುವ ‘ಪ್ರತಿಲಿಪಿ’ಯ ಕೀರ್ತಿ ಜಗದಗಲಕ್ಕೂ ಹರಡಲಿ, ತನ್ಮೂಲಕ ಕನ್ನಡ ಸಾಹಿತ್ಯ ಸೇವೆ ಅಜರಾಮರವಾಗಲಿ, ಅನಂತವಾಗಲಿ ಎಂದು ಮನತುಂಬಿ ಹಾರೈಸುತ್ತೇನೆ.”
- ವೆಂಕಟೇಶ್ ಎಂ ಟಿ