IP ಮಾರ್ಗದರ್ಶನ

ಆತ್ಮೀಯ ಸಾಹಿತಿಗಳೇ,

ಪ್ರತಿಲಿಪಿಯಲ್ಲಿ ಬರಹಗಾರರಿಗೆ ಉತ್ತಮ ಮತ್ತು ನ್ಯಾಯಯುತ ಅವಕಾಶಗಳ ಲಭ್ಯತೆಗಾಗಿ ನಾವು ಸದಾ  ಶ್ರಮಿಸುತ್ತಿದ್ದೇವೆ. ಪ್ರೀಮಿಯಂ ಸೌಲಭ್ಯ, ಪುಸ್ತಕಗಳು, ಆಡಿಯೊಬುಕ್‌ಗಳು, ಕಾಮಿಕ್ಸ್, ವೆಬ್‌ಸರಣಿಗಳು, ಚಲನಚಿತ್ರಗಳು, ಅನಿಮೇಷನ್ ಇತ್ಯಾದಿ ಪ್ರಾಜೆಕ್ಟ್‌ಗಳಲ್ಲಿ ಬಹಳಷ್ಟು ಬರಹಗಾರರು ಈಗ ಹಲವಾರು ಲಾಭಗಳನ್ನು ಪಡೆಯಲು ಸಮರ್ಥರಾಗಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ.

ಆದರೆ ಇತ್ತೀಚೆಗೆ, ಪ್ರತಿಲಿಪಿ ಬರಹಗಾರರನ್ನು ಸಂಪರ್ಕಿಸುತ್ತಿರುವ ಕೆಲವು ಸಂಸ್ಥೆಗಳು ಮತ್ತು ವ್ಯಕ್ತಿಗಳ ಕುರಿತು ಹಲವಾರು ದೂರುಗಳನ್ನು ನಾವು ಸ್ವೀಕರಿಸತೊಡಗಿದ್ದೇವೆ. ಅಂತಹ ಅನೇಕ ಸಂದರ್ಭಗಳಲ್ಲಿ, ಅವರು ಅಪೂರ್ಣ ಮಾಹಿತಿಯನ್ನು ನೀಡಿದ್ದಾಗಿಯೂ, ಆಕರ್ಷಕ ಕೊಡುಗೆಗಳನ್ನು ನೀಡುವುದಾಗಿ ಆಮಿಷ ತೋರಿಸಿರುವುದಾಗಿಯೂ ಮತ್ತು ಬರಹಗಾರರಿಗೆ ತಿಳಿದಿಲ್ಲದ ಷರತ್ತುಗಳು ಮತ್ತು ಅಂಶಗಳನ್ನು ಒಳಗೊಂಡಿರುವ ಒಪ್ಪಂದಗಳಿಗೆ ಸಹಿ ಹಾಕಿಸಿಕೊಳ್ಳಬಯಸಿದ್ದಾಗಿಯೂ ನಿಮ್ಮಲ್ಲನೇಕರು ದೂರು ನೀಡಿರುತ್ತೀರಿ. ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ನಿಮಗೆ ಒಪ್ಪಂದಕ್ಕಾಗಿ ನಿಮ್ಮನ್ನು ಸಂಪರ್ಕಿಸಿದಾಗ ಮತ್ತು ನಿಮ್ಮ ಕಥೆಗಳ ಯಾವುದೇ 'ಹಕ್ಕು'ಗಳನ್ನು ಖರೀದಿಸಲು ಬಯಸಿದಾಗ, ನೀವು ಏನು ಸಹಿ ಮಾಡುತ್ತಿದ್ದೀರಿ ಎಂಬುದರ ಕುರಿತು ನೀವು ತಿಳಿದಿರಬೇಕು.

ಪ್ರತಿಲಿಪಿಯ  ಬರಹಗಾರರು ತಮ್ಮ ಬರಹಗಳನ್ನು ಯಾವುದೇ ವೇದಿಕೆಯಲ್ಲಿ ಪ್ರಕಟಿಸಲು ಅಥವಾ ಪ್ರತಿಲಿಪಿಯಿಂದ ಅಪ್ರಕಟಿತಗೊಳಿಸಲು/ ಎಡಿಟ್ ಮಾಡಲು/ ಅಳಿಸಲು ಸದಾ ಸ್ವತಂತ್ರರು                        (ಪ್ರತಿಲಿಪಿಯೊಂದಿಗೆ ಯಾವುದೇ ಒಪ್ಪಂದವಾಗದಿದ್ದಲ್ಲಿ ಮಾತ್ರ). ಆದರೆ ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಸಾಹಿತಿಗಳಾದ ನೀವುಗಳು ಯಾವುದೇ ರೀತಿಯಲ್ಲಿ ಮೋಸಹೋಗದಂತೆ ತಡೆಯಲು ಮತ್ತು ಈ ಕುರಿತು ನೀವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು, ನಿಮ್ಮ ಕಥೆಗಳ ಯಾವುದೇ 'ಹಕ್ಕು'ಗಳನ್ನು ಪಡೆಯಲು ನಿಮ್ಮನ್ನು ಸಂಪರ್ಕಿಸುವ ಕಂಪನಿ/ವ್ಯಕ್ತಿಗೆ ನೀವು ಕೇಳಬೇಕಾದ ಪ್ರಮುಖ ಪ್ರಶ್ನೆಗಳು ಮತ್ತು ಮಾಹಿತಿಯನ್ನು ನಾವು ಈ ಕೆಳಗೆ  ನೀಡುತ್ತಿದ್ದೇವೆ.

ಮುಂದುವರೆಯುವ ಮೊದಲು, 'ಹಕ್ಕುಸ್ವಾಮ್ಯ' ಅಥವಾ 'ಹಕ್ಕುಗಳು' ಎಂದರೆ ನಿಖರವಾಗಿ ಏನೆಂದು ನಾವು ವಿವರಿಸಬಯಸುತ್ತೇವೆ. ಬರಹಗಾರರಾಗಿ, ನೀವು ಮೂಲತಃ ಹೊಸ ಕಥೆಯನ್ನು ಅಥವಾ ಯಾವುದೇ ಸಾಹಿತ್ಯಿಕ ಕೃತಿಯನ್ನು ರಚಿಸಿದಾಗ, ಆ ಕಥೆಯ (ಅಥವಾ ಸಾಹಿತ್ಯ ಕೃತಿಯ) ಹಕ್ಕುಸ್ವಾಮ್ಯವನ್ನು ನೀವು ಹೊಂದಿರುತ್ತೀರಿ. ಯಾರಾದರೂ ನಿಮ್ಮ ಕಥೆಯನ್ನು ಯಾವುದೇ ರೀತಿಯಲ್ಲಿ ಬಳಸಲು ಬಯಸಿದಾಗ, ಅವರು ಹಕ್ಕುಸ್ವಾಮ್ಯ ಮಾಲೀಕರಾದ ನಿಮ್ಮಿಂದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಅನುಮತಿಗಳು ನೀವು ಅವರಿಗೆ ನೀಡುತ್ತಿರುವ 'ಹಕ್ಕುಗಳು'. ಉದಾಹರಣೆಗೆ: ನಿಮ್ಮ ಕಥೆಯನ್ನು ಆಧರಿಸಿ ಆಡಿಯೊಬುಕ್ ಮಾಡಲು ನೀವು 'ಹಕ್ಕನ್ನು' ನೀಡಿದಾಗ, ಕಂಪನಿ/ವ್ಯಕ್ತಿಗೆ, ನೀವು ಮೂಲಭೂತವಾಗಿ ಆಡಿಯೋಬುಕ್ ಮಾಡಲು ಮತ್ತು ಅದನ್ನು ಬಳಸಲು ಅನುಮತಿಯನ್ನು ನೀಡುತ್ತೀರಿ.

ದಯವಿಟ್ಟು ಗಮನಿಸಿ: ನೀವು ಪ್ರತಿಲಿಪಿಯಲ್ಲಿ ಬರಹವನ್ನು ಪ್ರಕಟಿಸಿದ್ದರೆ, ಎಲ್ಲಾ ಹಕ್ಕುಸ್ವಾಮ್ಯವು ನಿಮ್ಮದೇ ಆಗಿರುತ್ತದೆ. ಪ್ರತಿಲಿಪಿಯು ನಿಮ್ಮಿಂದ ಯಾವುದೇ ಹಕ್ಕುಗಳ ಮೇಲೆ ನಿಮ್ಮ ಅನುಮತಿಯನ್ನು ಬಯಸಿದರೆ, ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ, ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳುತ್ತದೆ ಮತ್ತು ಉತ್ತಮ ಪರಸ್ಪರ ನಂಬಿಕೆಗಾಗಿ ಪ್ರತಿ ಒಪ್ಪಂದದ  ಪದವನ್ನೂ ವಿವರಿಸುತ್ತದೆ. ಇಷ್ಟರ ಬಳಿಕ ನೀವು ಅನುಮತಿಸಿದರೆ ಮಾತ್ರ ಒಪ್ಪಂದವನ್ನು ಜಾರಿಗೊಳಿಸಲಾಗುತ್ತದೆ. 

 

ಬರಹಗಾರನನ್ನು ಅವರ ಕಥೆಗಳ ಹಕ್ಕುಗಳನ್ನು ಪಡೆಯಲು ಯಾರಾದರೂ ಸಂಪರ್ಕಿಸಿದಾಗ ಕೇಳಬೇಕಾದ ಪ್ರಶ್ನೆಗಳು :

 

ಹಕ್ಕುಗಳನ್ನು ಖರೀದಿಸಲು ಬಯಸುವ ಕಂಪನಿ/ವ್ಯಕ್ತಿಯ ಕುರಿತು ಪ್ರಶ್ನೆಗಳು.

ಹಕ್ಕುಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಸಂಸ್ಥೆ  ಅಥವಾ ವ್ಯಕ್ತಿ ಯಾರು? 

ಕಥೆಯಲ್ಲಿ ಅಗತ್ಯವಿರುವ ಹಕ್ಕುಗಳ ಬಗ್ಗೆ ಪ್ರಶ್ನೆಗಳು.

ನಿಮ್ಮ ಯಾವ ಕಥೆಯನ್ನು ಪರಿಗಣಿಸಲಾಗುತ್ತಿದೆ ಮತ್ತು ಅಗತ್ಯವಿರುವ ಹಕ್ಕುಗಳ ನಿಖರವಾದ ಸ್ವರೂಪವೇನು?

  1. ಖರೀದಿದಾರರು ಲಭ್ಯವಿರುವ ಎಲ್ಲಾ ಹಕ್ಕುಗಳನ್ನು ಬಯಸುತ್ತಾರೆಯೇ? (ನೀವು ಯಾರಿಗಾದರೂ ಲಭ್ಯವಿರುವ ಎಲ್ಲಾ ಹಕ್ಕುಗಳನ್ನು ನೀಡಿದರೆ, ಅವರು ನಿಮ್ಮ ಕಥೆಯನ್ನು ಯಾವುದೇ ರೀತಿಯಲ್ಲಿ ಬಳಸಬಹುದು)

    ಉದಾಹರಣೆ : ಲಭ್ಯವಿರುವ ಎಲ್ಲಾ ಹಕ್ಕುಗಳಲ್ಲಿ ಪ್ರಕಾಶನ ಹಕ್ಕುಗಳು, ಆಡಿಯೋ ಹಕ್ಕುಗಳು, ಇಬುಕ್ ಪ್ರಕಾಶನ ಹಕ್ಕುಗಳು, ವೀಡಿಯೊ ನಿರ್ಮಾಣ ಹಕ್ಕುಗಳು, ಕಾಮಿಕ್ ಹಕ್ಕುಗಳು ಇತ್ಯಾದಿ ಸೇರಿವೆ.

  2. ಖರೀದಿದಾರರು ಕೆಲವು ನಿರ್ದಿಷ್ಟ ಸ್ವರೂಪಗಳಿಗೆ ಪರಿವರ್ತಿಸಲು ಕೆಲವು ಭಾಗಶಃ ಹಕ್ಕುಗಳನ್ನು ಬಯಸುತ್ತಾರೆಯೇ? (ನೀವು ಯಾರಿಗಾದರೂ ನಿರ್ದಿಷ್ಟ ಹಕ್ಕನ್ನು ನೀಡಿದರೆ, ಅವರು ನಿಮ್ಮ ಕಥೆಯನ್ನು ಒಪ್ಪಂದದಲ್ಲಿ ಉಲ್ಲೇಖಿತ ನಿರ್ದಿಷ್ಟ ಸ್ವರೂಪದಲ್ಲಿ ಮಾತ್ರ ಬಳಸಬಹುದು)

    ಉದಾಹರಣೆ : ಖರೀದಿದಾರರು ಆ ಕಥೆಯ ಆಡಿಯೊ ಹಕ್ಕುಗಳನ್ನು ಮಾತ್ರ ಬಯಸುತ್ತಾರೆಯೇ? ಹೌದಾದಲ್ಲಿ ನಂತರ ಅವರು ಅದನ್ನು ಪುಸ್ತಕವಾಗಿ ಪ್ರಕಟಿಸಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಯಾವ ಆಂಶಿಕ ಹಕ್ಕುಗಳನ್ನು ನೀಡುತ್ತಿರುವಿರಿ ಎಂಬುದನ್ನು ನೀವು ತಿಳಿದಿರಬೇಕು.

  3. ಪ್ರಸ್ತುತ ಸಾಹಿತ್ಯ ರೂಪದಲ್ಲಿ ಕಥೆಯನ್ನು ವಿತರಣೆಗಾಗಿ ಬಳಸಲು ಖರೀದಿದಾರರಿಗೆ ಹಕ್ಕುಗಳು ಬೇಕೇ?

    ಉದಾಹರಣೆ : ನೀವು ಆ ಕಥೆಯನ್ನು ಇಬುಕ್ ಆಗಿ ಪ್ರಕಟಿಸಿದ್ದೀರಿ ಎಂದು ಭಾವಿಸೋಣ. ಹಾಗಾಗಿ ಆ ಕಥೆಯನ್ನು ಅದೇ ರೂಪದಲ್ಲಿ ಬಳಸಲು ಮತ್ತು ಇತರ ಚಾನಲ್‌ಗಳಲ್ಲಿ ವಿತರಿಸಲು ಖರೀದಿದಾರರಿಗೆ ಹಕ್ಕುಗಳು ಬೇಕೇ?

  4. ಇದು ವಿಶೇಷ ವ್ಯವಸ್ಥೆಯೇ? ಅದೇ ಹಕ್ಕುಗಳನ್ನು ಬೇರೆಯವರಿಗೆ ನೀಡಬಹುದೇ?

    ವಿಶೇಷ ವ್ಯವಸ್ಥೆ ಎಂದರೆ ನೀವು ಖರೀದಿದಾರರಿಗೆ ಹಕ್ಕುಗಳನ್ನು (ಲಭ್ಯವಿರುವ ಎಲ್ಲಾ ಹಕ್ಕುಗಳು ಅಥವಾ ಭಾಗಶಃ ಹಕ್ಕುಗಳು) ನೀಡಿದ ನಂತರ ನೀವು ಅದೇ ಹಕ್ಕುಗಳನ್ನು ಇನ್ನೊಬ್ಬ ಖರೀದಿದಾರರಿಗೆ ನೀಡಲು ಸಾಧ್ಯವಿಲ್ಲ.

    ಉದಾಹರಣೆ : ನೀವು 'XYZ' ಕಂಪನಿಗೆ ಆಡಿಯೊಗಾಗಿ ಕಥೆಯ ವಿಶೇಷ ಹಕ್ಕುಗಳನ್ನು ನೀಡಿದ್ದರೆ, ಅದೇ ಕಥೆಯ ಆಡಿಯೋ ಹಕ್ಕುಗಳನ್ನು ನೀವು ‘ಎಬಿಸಿ’ ಕಂಪನಿಗೆ ನೀಡಲು ಸಾಧ್ಯವಿಲ್ಲ.

  5. ಹಕ್ಕುಗಳನ್ನು ನೀಡಲು ಒಪ್ಪಂದಕ್ಕೆ ಸಹಿ ಮಾಡಿದ ನಂತರ, ಯಾರು ಕಥೆಯ ಹಕ್ಕುಸ್ವಾಮ್ಯವನ್ನು ಹೊಂದಿರುತ್ತಾರೆ? (ಮೂಲ ಕಥೆ) ಅಲ್ಲದೆ, ಹಕ್ಕುಗಳನ್ನು ಬಳಸಿಕೊಂಡು ತಯಾರಿಸಲಾದ ವಿಷಯದ ಹಕ್ಕುಸ್ವಾಮ್ಯವನ್ನು ಯಾರು ಹೊಂದಿರುತ್ತಾರೆ?

    ಉದಾಹರಣೆ: ನಿಮ್ಮ ಕಾದಂಬರಿಯ ಚಲನಚಿತ್ರ ನಿರ್ಮಾಣ ಹಕ್ಕುಗಳನ್ನು ನೀವು ಖರೀದಿದಾರರಿಗೆ ನೀಡಿದ್ದೀರಾ? ನಂತರ ನೀವು 'ಮೂಲ ಕಥೆ' (ಈ ಸಂದರ್ಭದಲ್ಲಿ ನಿಮ್ಮ ಕಾದಂಬರಿ) ಹಕ್ಕುಸ್ವಾಮ್ಯವನ್ನು ಹೊಂದಿದ್ದೀರಾ? ಅಥವಾ ಅವರುಹೊಂದಿದ್ದಾರೆಯೇ ? ನಿಮ್ಮ ಕಾದಂಬರಿಯನ್ನು ಆಧರಿಸಿದ ಚಲನಚಿತ್ರದ ಹಕ್ಕುಗಳಿಗೂ, ಆ ಚಲನಚಿತ್ರ ಅಥವಾ ಖರೀದಿದಾರನ ಹಕ್ಕುಗಳನ್ನು ನೀವು ಹೊಂದುತ್ತೀರಾ?

  6. ಯಾವ ಸಮಯದವರೆಗೆ (ಅವಧಿ) ಹಕ್ಕುಗಳನ್ನು ನೀಡಬೇಕು ಮತ್ತು ಇನ್ನೊಂದು ಸ್ವರೂಪದಲ್ಲಿ ತಯಾರಿಸಲಾದ ವಿಷಯವನ್ನು ಎಷ್ಟು ಸಮಯದವರೆಗೆ ಬಳಸಲಾಗುತ್ತದೆ?

    ಉದಾಹರಣೆ: ನಿಮ್ಮ ಕಥೆಯಿಂದ ವೀಡಿಯೊ ಜಾಹೀರಾತನ್ನು ಮಾಡಲು ನೀವು ಹಕ್ಕುಗಳನ್ನು ನೀಡಿದ್ದೀರಿ ಅಥವಾ ನಿಮ್ಮ ಕಥೆಯನ್ನು ಭೌತಿಕ ಪುಸ್ತಕವಾಗಿ ಪ್ರಕಟಿಸುವ ಹಕ್ಕನ್ನು ನೀಡಿದ್ದೀರಿ ಎಂದಿಟ್ಟುಕೊಳ್ಳಿ. ನಂತರ ಅವರು ಎಷ್ಟು ಸಮಯದವರೆಗೆ ಆ ಜಾಹೀರಾತನ್ನು ಬಳಸಬಹುದು ಅಥವಾ ಅವರು ಆ ಪುಸ್ತಕವನ್ನು ಮುದ್ರಿಸಬಹುದು?

    ಕಥೆಯ ಆಧಾರದ ಮೇಲೆ ಭವಿಷ್ಯದ ಕೃತಿಗಳ ರಚನೆಯ ಬಗ್ಗೆ ಪ್ರಶ್ನೆಗಳು

  1. ಒಪ್ಪಂದಕ್ಕೆ ಸಹಿ ಮಾಡಿದ ನಂತರ ಕಥೆಗೆ ಯಾವುದೇ ಸೇರ್ಪಡೆ ಅಥವಾ ಎಡಿಟ್ ಮಾಡಿದರೆ, ನವೀಕರಿಸಿದ ಕಥೆಯ ಹಕ್ಕುಗಳಿಗೆ ಏನಾಗುತ್ತದೆ?

    ಉದಾಹರಣೆ: ನಿಮ್ಮ ಕಥೆಯು 14ನೇ ಶತಮಾನದ ರಾಜಾಡಳಿತದ ವಿಷಯಾಧಾರಿತವಾಗಿದೆ ಎಂದಿಟ್ಟುಕೊಳ್ಳಿ, ಈಗ ಖರೀದಿದಾರರು ಅದನ್ನು ಮಾರ್ಪಡಿಸಿದರೆ ಮತ್ತು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಕಥೆಯನ್ನು ಬದಲಿಸಿದರು ಅಥವಾ ಹೊಸದನ್ನು ಸೇರಿಸಿದರೆ, ಆ ನವೀಕರಿಸಲ್ಪಟ್ಟ  ಕಥೆಯ ಹಕ್ಕು  ಯಾರದ್ದಾಗಿರುತ್ತದೆ?

  2. ಪೂರ್ವಭಾಗ, ಉತ್ತರಭಾಗ ಅಥವಾ ಯಾವುದೇ ಪಾತ್ರದ ಸ್ಪಿನ್-ಆಫ್ ಕಥೆಯನ್ನು ಮೂಲ ಕಥೆಗೆ ಜೋಡಿಸಿದರೆ, ಈ ಹೊಸ ಸಂಬಂಧಿತ ಕೃತಿಗಳ ಹಕ್ಕುಗಳಿಗೆ ಏನಾಗುತ್ತದೆ?

ಬರಹಗಾರನ ಇತರ ಕಥೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು.

ಈ ಒಪ್ಪಂದವು ನನ್ನ ಯಾವುದೇ ಇತರ ಕಥೆಗಳ ಬಳಕೆಯ ಮೇಲೆ ಯಾವುದೇ ಸಂಭವನೀಯ ರೀತಿಯಲ್ಲಿ ಪರಿಣಾಮ ಬೀರುತ್ತದೆಯೇ?

ವಿತ್ತೀಯ ಪ್ರಯೋಜನಗಳು ಮತ್ತು ಶೀರ್ಷಿಕೆ ಕ್ರೆಡಿಟ್‌ಗಳಿಗೆ ಸಂಬಂಧಿಸಿದ ಪ್ರಶ್ನೆಗಳು :

  1. ಪಾವತಿ ವ್ಯವಸ್ಥೆ ಏನು? 

  2. ಆದಾಯದ ಪಾಲನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ? 

  3. ಆದಾಯದ ಪಾಲು ಮತ್ತು ಮುಂಗಡ ಪಾವತಿಯನ್ನು ಯಾವಾಗ ಮತ್ತು ಹೇಗೆ ಪಾವತಿಸಲಾಗುತ್ತದೆ? 

  4. ಆದಾಯದ ಷೇರು ಪಾವತಿಗಳ ವಿರುದ್ಧ ಮುಂಗಡ ಪಾವತಿಯ ಹೊಂದಾಣಿಕೆ ಇರುತ್ತದೆಯೇ?

  5. ಕಥೆಯ ಹಕ್ಕುಗಳನ್ನು ಬಳಸಿಕೊಂಡು ನಿರ್ಮಿಸಲಾದ ಯಾವುದೇ ವಿಷಯದ ಶೀರ್ಷಿಕೆ ಕ್ರೆಡಿಟ್‌ಗಳನ್ನು ಬರಹಗಾರರಿಗೆ ಹೇಗೆ ನೀಡಲಾಗುತ್ತದೆ?

ಒಪ್ಪಂದದ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳು.

ಕಥೆಯನ್ನು ಅನುಮತಿಯಿಲ್ಲದ ಬಳಸಿದರೆ ಅಥವಾ ಸಮಯಕ್ಕೆ ಪಾವತಿಯನ್ನು ಸ್ವೀಕರಿಸದಿದ್ದರೆ, ಬರಹಗಾರನಿಗೆ ಯಾವ ಪರಿಹಾರಗಳಿವೆ?

ಈ ಪ್ರಶ್ನೆಗಳನ್ನು ಹಂಚಿಕೊಳ್ಳುವುದರೊಂದಿಗೆ, ನಿಮ್ಮ ಕಥೆಗಳ ಹಕ್ಕುಗಳ ಕುರಿತು ಮಾಹಿತಿ ನೀಡುವುದು ಮತ್ತು ನಿಮ್ಮನ್ನು ಯಾವುದೇ ರೀತಿಯ ಮೋಸ/ವಂಚನೆಗಳಿಂದ ತಡೆಯುವುದು  ನಮ್ಮ ಉದ್ದೇಶವಾಗಿದೆ. ಬರಹಗಾರರು ಅವರು ಸಹಿ ಮಾಡುತ್ತಿರುವ ಒಪ್ಪಂದಗಳ ಕುರಿತು ಹೆಚ್ಚು ಜಾಗೃತರಾಗಲು ಇದು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಪ್ರತಿಲಿಪಿಯನ್ನೂ ಸೇರಿಸಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ನಿಮ್ಮ ಕೃತಿಗಳ ಹಕ್ಕುಗಳನ್ನು ಕೇಳಿ, ನೀವು ಒಪ್ಪಂದಗಳಿಗೆ ಸಹಿ ಮಾಡುವ ಮೊದಲು ಈ ಎಲ್ಲಾ ಪ್ರಶ್ನೆಗಳನ್ನು ಕೇಳಿ ಮತ್ತು ಉತ್ತರಗಳನ್ನು ಸ್ಪಷ್ಟವಾಗಿ ಪಡೆದುಕೊಳ್ಳಿ. ಜೊತೆಗೆ ನಿಮ್ಮ ಸಮಯ, ಕಲ್ಪನೆ ಮತ್ತು ಬುದ್ಧಿಶಕ್ತಿ ವಿನಿಯೋಗಿಸಿ ರಚಿಸಲ್ಪಟ್ಟ ಕೃತಿಯು ಉತ್ತಮ ಮೌಲ್ಯ ಪಡೆಯಲಿ ಎಂಬುದು ನಮ್ಮ ಹಾರೈಕೆ. 

ನೀವು ಇನ್ನೂ ಕೆಲವು ಅನುಮಾನಗಳನ್ನು ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ, [email protected] ನಲ್ಲಿ ನಮ್ಮನ್ನು ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಬಹುದು. .

ಯಾವುದೇ ಹೆಚ್ಚಿನ ಸಹಾಯಕ್ಕಾಗಿ, ಅಂತಹ ಹೆಚ್ಚಿನ ಮಾಹಿತಿಗಾಗಿ ಪ್ರತಿಲಿಪಿಕನ್ನಡ ಪ್ರೊಫೈಲ್ ಅನ್ನು ಹಿಂಬಾಲಿಸಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?